ಹೂವಿನ ಹಡಗಲಿ

ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ

ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ


ಹೂವಿನಹಡಗಲಿ, ಆ.27: ಪಟ್ಟಣದ ಈದ್ ಮಿಲಾದ್ ಕಮಿಟಿ ವತಿಯಿಂದ ಮುಸ್ಲಿಂ ಸಮಾಜದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷರಾದ ಪಿ.ಟಿ. ಪರಮೇಶ್ವರ ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈದ್ ಮಿಲಾದ್ ಅಂಗವಾಗಿ ಕಮಿಟಿ ಪ್ರತಿವರ್ಷವೂ ಬಡವರು ಹಾಗೂ ಮಧ್ಯಮ ವರ್ಗದವರ ಪರವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು. ಮುಂದಿನ ವರ್ಷದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾಮೂಹಿಕ ವಿವಾಹಕ್ಕೆ ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ನೀಡುವುದಾಗಿ ಭರವಸೆ ನೀಡಿದರು.  

ಹಜರತ್ ಸೈಯದ್ ಸೋಫಿಯಾನ್ ಸಖಾಫಿ ಮಾತನಾಡಿ, ಎಸ್‌ಎಸ್‌ಎಫ್ ವತಿಯಿಂದ ರಾಜ್ಯಮಟ್ಟದ ಸಾಹಿತ್ಯೋತ್ಸವವನ್ನು ಆಯೋಜಿಸಲಾಗಿದ್ದು, ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಹಡಗಲಿ ಪಟ್ಟಣದ ಆರು ದೈವದ ಸದಸ್ಯರು, ಆರು ಮಸೀದಿಗಳ ಮೌಲ್ವಿಗಳು ಹಾಗೂ ಹಜರತ್ಗಳು ಭಾಗವಹಿಸಿ 11 ಜೋಡಿಗಳ ನಿಕಾಹ್ ಕಾರ್ಯಕ್ರಮ ನೆರವೇರಿಸಿದರು.  ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾವಿಹಳ್ಳಿ ಸದ್ದಾಂ ಹುಸೇನ್, ಉಪಾಧ್ಯಕ್ಷ ಗಂಟೆ ಮುಫೀಸ್, ಕಾರ್ಯದರ್ಶಿ ಬಾಣದ ಇರ್ಫಾನ್, ಖಜಾಂಚಿ ಕಪಾಲಿ ರೋಷನ್ ಜಮೀರ್, ಸದಸ್ಯರಾದ ಬಿಚ್ಚತ್ತಿ ದಾದಾಪೀರ್, ರಿಯಾಜ್ ಸೇರಿದಂತೆ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ