ಹೂವಿನ ಹಡಗಲಿ

ಶ್ರದ್ಧಾ-ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಶ್ರದ್ಧಾ-ಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

ಹೂವಿನಹಡಗಲಿ ಫೆ.19: ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಶಿವರಾತ್ರಿಯನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಭಕ್ತರು ಬೆಳಿಗ್ಗೆಯಿಂದಹಿರಾತ್ರಿವರೆಗೆ ದೇವಸ್ಥಾನಗಳಿಗೆ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಕಾರ‌್ಯಕ್ರಮಗಳು ಜರುಗಿದವು. ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. 

ವಿದ್ಯಾಲಯದ ಸಂಚಾಲಕಿ ಬಿ.ಕೆ.ಶೀಲಾಜಿ ಅವರು ಬೆಳಿಗ್ಗೆ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಿ ಶಿವರಾತ್ರಿ ಚಾಲನೆ ನೀಡಿದರು.ಯುವ ಮುಖಂಡರಾದ ಕೃಷ್ಣನಾಯ್ಕ ಶಿವಲಿಂಗುಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿದರು. ಆಟೊ,ಕಾರುಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಿವಲಿಂಗ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.ನಂದಿ ಕ್ಲಿನಿಕ್ ಡಾ.ಶಂಕರಮ್ಮ ಪಾಟೀಲ್ ಅವರ ಮನೆಯಲ್ಲಿ ವಿದ್ಯಾಲಯ ಪರಿವಾರದವರು ಶಿವಲಿಂಗು ಪೂಜೆ, ದೀಪಾರಾಧನೆ ನಡೆಸಿದರು. ನಂತರ ಈಶ್ವರನ ಚಿತ್ರ ಪ್ರದರ್ಶನ ನಡೆಯಿತು.  

ಪಟ್ಟಣದ ಸಾರ್ವಜನಿಕ ಆಸ್ಪತ್ರೆ,ಉಪ ಕಾರಾಗೃಹದಲ್ಲಿ ಹಾಲು,ಹಣ್ಣು ವಿತರಿಸಲಾಯಿತು. ಬ್ರಹ್ಮಕುಮಾರಿ ಶೀಲಾಜಿ ಅವರು ಕಾರಾಗೃಹದಲ್ಲಿ ಮಾತನಾಡಿ ಭಾರತದಲ್ಲಿ ಮಹಾಶಿವರಾತ್ರಿಯ ವಿಶೇಷ ಮಹತ್ವವನ್ನು ಪಡೆದಿದ್ದು, ಸರ್ವಜನರ ಭಕ್ತಿಭಾವದ ಪ್ರತೀಕವಾಗಿದೆ ಎಲ್ಲರೂ ಅತಿ ಆಸೆಯನ್ನು ತೊರೆದು ಜೀವನ್ಮುಕ್ತಿಗೆ ಆಧ್ಯಾತ್ಮಕಡೆಗೆ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು ಎಂದರು. ಈ ವೇಳೆ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಪರಿವಾರದವರು ಇದ್ದರು. 

ಪಟ್ಟಣದ ಕಲ್ಲೇಶ್ವರ ದೇಗುಲ, ಹಳೆ ಬಸ್‌ನಿಲ್ದಾಣ ಹತ್ತಿರ, ಆಂಜನೇಯ, ವೀರಭದ್ರೇಶ್ವರ, ಸೊಪ್ಪಿನ ಕಾಳಮ್ಮ ಬಡಾವಣೆಯ ಮಲ್ಲಿಕಾರ್ಜುನ ಸ್ವಾಮಿ, ಸಿಂಗಟಾಲೂರು ಕಾಲೋನಿಯ ಮಹಾಗಣಪತಿ, ಮದಲಗಟ್ಟಿ ವೃತ್ತದ ಗಣೇಶನ ಗುಡಿ, ಗವಿಮಠದ ಬಳಿ ಕೊಟ್ಟೂರೇಶ್ವರ ಸ್ವಾಮಿಯ ಸೇರಿದಂತೆ ಎಲ್ಲ ದೇವಸ್ಥಾನಗಳಲ್ಲಿ  ನಾನಾ ಟ್ರಸ್ಟ್‌ ವತಿಯಿಂದ ಬೆಳಿಗ್ಗೆ ಶಿವರಾತ್ರಿ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಲಾಯಿತು.   

ಪಟ್ಟಣದ ಗವಿ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ಡಾ.ಹಿರಿಶಾಂತವೀರಸ್ವಾಮೀಜಿ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ‌್ಯಕ್ರಮ ಜರುಗಿತು.ಸೋಗಿ ಎಂ.ಎಂ.ಹಾಲಯ್ಯ ಶಾಸ್ತ್ರಿ ಪೌರೋಹಿತ್ಯ ನಡೆಯಿತು. ಶ್ರೀಮಠದ ಕಾರ‌್ಯಕರ್ತರು,ಯುವಕ ಸಂಘದ ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು. ಮಹಾಶಿವರಾತ್ರಿ ನಿಮಿತ್ತ ಗವಿಸಿದ್ದೇಶ್ವರ ಸ್ವಾಮಿಯ ಕರ್ತೃ ಗದ್ದುಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಉಪವಾಸ ವ್ರತ ಆಚರಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. 

ಇಂದು ಕುರುವತ್ತಿ ಮಲ್ಲಿಕಾರ್ಜುನ,ಬಸವೇಶ್ವರ ಸ್ವಾಮಿಯ ರಥೋತ್ಸವ 

ಹೂವಿನಹಡಗಲಿ ಫೆ.19- ತಾಲ್ಲೂಕಿನ  ಕುರುವತ್ತಿಯಲ್ಲಿಂದು ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಸಂಜೆ 5.30ಕ್ಕೆ ಸಂಭ್ರಮದಿಂದ ನಡೆಯಲಿದೆ. ರಥಕ್ಕೆ ಕಳಸ ಪ್ರತಿಷ್ಠಾಪನೆ, 20ರಂದು ಸಂಜೆ ಸ್ವಾಮಿಯ ರಥೋತ್ಸವ, 21ರಂದು ಓಕಳಿ ನಡೆಯಲಿದೆ ಜತೆಗೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.ಜಾತ್ರೆಗೆ ಬಂದ ಭಕ್ತಾಧಿಗಳಿಗೆ ಜಿಲ್ಲಾ, ತಾಲೂಕು ಆಡಳಿತದಿಂದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದ್ದಾರೆ ಎಂದು ದೇಗುಲದ ಕಾರ್ಯನಿರ್ವಾಹಕಾಧಿಕಾರಿ ಕೃಷ್ಣಪ್ಪ ಹೇಳಿದರು. 


ಸುದ್ದಿ ಓದಿ