ಹೂವಿನ ಹಡಗಲಿ

ವಿವಿಧ ಅಭಿವೃದ್ಧಿ ಕಟ್ಟಡ ಕಾಮಗಾರಿಗಳ ಭೂಮಿ ಪೂಜೆ

ವಿವಿಧ ಅಭಿವೃದ್ಧಿ ಕಟ್ಟಡ ಕಾಮಗಾರಿಗಳ ಭೂಮಿ ಪೂಜೆ


ಲೋಕದರ್ಶನ ವರದಿ 

ಹೂವಿನಹಡಗಲಿ 05: ವೇದ, ಆಗಮ, ಉಪನಿಷತ್ತುಗಳು, ಸಂಸ್ಕೃತ ಮತ್ತು ಸಂಗೀತ  ಮನುಕುಲದ ಜೀವನಾಡಿಯಾಗಿದ್ದು, ಅವುಗಳ ಅಧ್ಯಯನದಿಂದ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂದು ಸದ್ಗುರು ಶಿವಯೋಗಿ ಹಾಲಸ್ವಾಮಿ ಮಠದ ಸಣ್ಣ ಹಾಲಸ್ವಾಮೀಜಿ ಹೇಳಿದರು.  

ಗ್ರಾಮೀಣಾಭಿವೃದ್ಧಿ ಸಂಸ್ಥೆ,ಶ್ರೀಗುರು ಹಾಲೇಶ್ವರ ದೇವಸ್ಥಾನ ಸಮಿತಿ ಸಹಯೋಗದಿಂದ ಏರಿ​‍್ಡಸಿದ್ದ ವಿವಿಧ ಅಭಿವೃದ್ಧಿ ಕಟ್ಟಡ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಂಗಳವಾರ ಮಾತನಾಡಿದರು.ವೇದ, ಉಪನಿಷತ್ತುಗಳ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅವುಗಳಿಗೆ ತನ್ನದೇ ಆದ ಪೌರಾಣಿಕ ಹಿನ್ನಲೆಯಿದ್ದು, ಅಗಾಧ ಶಕ್ತಿಯನ್ನು ಹೊಂದಿವೆ ಎಂದರು.  

ಯೋಗದಿಂದ ಸದೃಢ ಆರೋಗ್ಯಕ್ಕೆ ಅಗತ್ಯ. ಮಾನಸಿಕ ಅಸ್ವಸ್ಥತೆ ನಿವಾರಣೆಯಾಗುತ್ತದೆ. ಶ್ರೀಮಠ ಹಾಗೂ ಸಂಸ್ಥೆಗಳಿಂದ ಪ್ರತಿ ತಿಂಗಳು 2ಬಾರಿ ಯೋಗ ಶಿಬಿರಗಳನ್ನು ಆಯೋಜಿಸುವ ಚಿಂತನೆಯಿದೆ ಎಂದರು.  

ಗ್ರಾಮದಲ್ಲಿ ಸುಸಜ್ಜಿತ ಕಲ್ಯಾಣಮಂಟಪದ ಕೊರತೆಯಿದ್ದು, ನಮ್ಮ ಸಂಸ್ಥೆಗಳಿಂದ ನಿರ್ಮಿಸುವ ಯೋಚನೆಯೂ ಇದೆ. ಜತೆಗೆ ಅಗತ್ಯವಿಲ್ಲದಿದ್ದರೂ ವೃದ್ಧಾಶ್ರಮ ನಿರ್ಮಿಸುವ ಅನಿವಾರ್ಯತೆಯಿದೆ. ಇದರಿಂದ ಮಕ್ಕಳಿದ್ದರೂ ಅನಾಥವಾಗಿರುವ ವೃದ್ಧರನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ. 

ಪ್ರಸ್ತುತ ಈ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು 6ಕೋಟಿ ರೂ.ಗಳ ಅಂದಾಜು ಮೊತ್ತದ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತಿದೆ. ಶ್ರೀಮಠದ ಭಕ್ತರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸರಕಾರ ಮತ್ತು ಜನಪ್ರತಿನಿಗಳ ಸಹಕಾರದ ಅಗತ್ಯವಿದೆ ಎಂದರು.  

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಮಠ ಮಾನ್ಯಗಳು ಸಮಾಜ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯ. ಹಿಂದಿನಿಂದಲೂ ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಸಮಾಜವನ್ನು ಪ್ರಗತಿ ಹಾಗೂ ಸನ್ಮಾರ್ಗದತ್ತ ಕೊಂಡೊಯ್ಯುತ್ತಿವೆ. ಇದೀಗ ಹಾಲಸ್ವಾಮಿ ಮಠದಿಂದ ಸಂಗೀತ ಪಾಠ ಶಾಲೆ, ಗೋಶಾಲೆ, ವೇದ,ಉಪನಿಷತ್ತುಗಳ ಅಧ್ಯಯನ ಕೇಂದ್ರಗಳನ್ನು ನಿರ್ಮಿಸುತ್ತಿರುವುದು ಉತ್ತಮ ಬೆಳೆವಣಿಗೆ. ಇದಕ್ಕೆ ತಾವು ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.  

ಇದಕ್ಕೂ ಮೊದಲು ಶಾಸಕರು ವಿಶ್ವೇಶ್ವರ ಹಾಲಸ್ವಾಮೀಜಿ ವೇದ, ಆಗಮ, ಸಂಸ್ಕೃತ ಸಂಗೀತ ಪಾಠಶಾಲೆ, ಹಾಲಶಂಕರ ಸ್ವಾಮೀಜಿ ಯೋಗ ಧ್ಯಾನ ಮಂದಿರ, ಹಾಲಸ್ವಾಮೀಜಿ ಮಂಗಲ ಮಂದಿರ, ಗ್ರಾಮ ದೇವತೆ ವೃದ್ಧಾಶ್ರಮ, ಮಾತೋಶ್ರೀ ಹಾಲಮ್ಮ ತಾಯಿ ಗೋಶಾಲೆ, ಗುರುಮೂರ್ತಿ ಸ್ವಾಮೀಜಿ ಆಯುರ್ವೇದ ಪ್ರಕೃತಿ ಚಿಕಿತ್ಸಾಲಯ ಕಟ್ಟಡಗಳ ಸಂಕೀರ್ಣಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ, ವಿಶ್ವೇಶ್ವರ ಪಂಡಿತಾರಾಧ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು.  

ತುಂಬಿನಕೆರೆ ವೇ.ಮೂ, ವೀರೇಶ್ವರ ಸ್ವಾಮಿ,  ಮೈಲಾರ ಶುಗರ್ಸ್‌ ಚೇರ್‌ಮನ್ ರಾಮಕೃಷ್ಣಾರೆಡ್ಡಿ, ಗ್ರಾ.ಪಂ.ಅಧ್ಯಕ್ಷೆ ಈಡಿಗರ ಸಾವಿತ್ರಮ್ಮ, ಸದಸ್ಯಅಮೃತ ಪಟ್ಟೇದ, ಸೋಮಶೇಖರ ಹಲಗೇರಿ, ವೀರಣ್ಣ ಬಳ್ಳೊಳ್ಳಿ, ಕಾಶಿಗವಿ ಕೊಟ್ರೇಶಪ್ಪ, ಬಾಣದ ಹನುಮಂತಪ್ಪ ಜಿ.ಪಂ. ಮಾಜಿ ಸದಸ್ಯ ಜಿ.ವಸಂತ, ಇತರರಿದ್ದರು. 


ಸುದ್ದಿ ಓದಿ