ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ   Join hands to build a drug-free society

ಲೋಕದರ್ಶನ ವರದಿ 

ಮುಂಡಗೋಡ 28 : ಯುವಜನತೆ ಹಾಗೂ ವಿದ್ಯಾರ್ಥಿಗಳು ಗಾಂಜಾ, ಡ್ರಗ್ಸ್ನಂತಹ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗದೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ರಮೇಶ್ ಹಾನಪೂರ್ ಕರೆ ನೀಡಿದ್ದಾರೆ. "ಮಾದಕ ದ್ರವ್ಯ ವ್ಯಸನವು ಯುವಕರ ಭವಿಷ್ಯವನ್ನು ಹಾಳುಮಾಡುವ ಗಂಭೀರ ಸಾಮಾಜಿಕ ಪಿಡುಗು. ಮಾದಕ ವಸ್ತುಗಳ ತಡೆ ಕಾಯ್ದೆಯಡಿ ಕಠಿಣ ಶಿಕ್ಷೆಗೆ ಅವಕಾಶವಿದೆ. ಸಾರ್ವಜನಿಕರಿಗೆ ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಪೊಲೀಸರಿಗೆ ತಿಳಿಸಿ ಸಹಕರಿಸಬೇಕು" ಎಂದು ಮುಂಡಗೋಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿಪಿಐ ರಮೇಶ್ ಹಾನಪೂರ್ ರವರು ಮಾತನಾಡಿದರು.   

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ‘ಆಪರೇಷನ್ ದಿಸ್‌’ ಅಭಿಯಾನದಡಿ ಮುಂಡಗೋಡ ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ವ್ಯಸನ ಮುಕ್ತ ಸಮಾಜ ನಿರ್ಮಾಣ’ ಜಾಗೃತಿ ಜಾಥಾಗೆ ಮುಂಡಗೋಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿಪಿಐ ರಮೇಶ್ ಹಾನಪೂರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ಟಿ.ವೈ. ದಾಸನಕೊಪ್ಪ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಗೃತಿ ಜಾಥಾವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಲುಪಿತು. ಕಾರ್ಯಕ್ರಮದ ಆರಂಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಬಳಿಕ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, "ಮಾದಕ ವ್ಯಸನವು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ಥೈರ್ಯ ಹಾಗೂ ಸಾಮಾಜಿಕ ಬದುಕನ್ನು ನಾಶಪಡಿಸುತ್ತದೆ. ಕ್ಷಣಿಕ ಸುಖದ ಆಕರ್ಷಣೆಗೆ ಒಳಗಾಗದೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು. ವ್ಯಸನಮುಕ್ತ ಜೀವನವೇ ಉಜ್ವಲ ಭವಿಷ್ಯಕ್ಕೆ ಅಡಿಪಾಯ" ಎಂದರು. ಈ ಕಾರ್ಯಕ್ರಮದಲ್ಲಿ ಪಿಎಸ್‌ಐ ಮಂಜುನಾಥ ಗೌಡರ್, ಕಾಲೇಜಿನ ಪ್ರಾಂಶುಪಾಲ ಪ್ರಸನ್ ಸಿಂಗ್ ಹಜಾರೆ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಎಸ್‌. ಪಟ್ಟಣಶೆಟ್ಟಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ರಾಯ್ಕರ, ಜ್ಯೋತಿ ಹಿರೇಮಠ್, ಟಿಬೆಟಿಯನ್ ಹಿರಿಯ ಬೌದ್ಧ ಸನ್ಯಾಸಿ ಜಂಪಾ ಲೊಬಸಾಂಗ್, ಪೊಲೀಸ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.