ಸ್ವಚ್ಛ ಹಾಗೂ ಶುದ್ಧ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ

ಸ್ವಚ್ಛ ಹಾಗೂ ಶುದ್ಧ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ It is everyone's primary duty to maintain and develop a clean and pure environment

ಸವಣೂರ 06 : ಪರಿಸರವನ್ನು ನಾವು ಕಾಪಾಡಿದರೆ ಪರಿಸರವು ನಮ್ಮನ್ನು ಕಾಪಾಡುತ್ತದೆ. ಸ್ವಚ್ಛ ಹಾಗೂ ಶುದ್ಧ ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕಿದೆ ಎಂದು ಹಿರೇಮುಗದೂರ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಿಯಾಜ್ ನದಾಪ್ ಹೇಳಿದರು.ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ಹಿರೇಮುಗದೂರ ಗ್ರಾಮ ಪಂಚಾಯತಿಯಲ್ಲಿ ಬಜ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರವನ್ನು ಸ್ವಚ್ಛವಾಗಿಡುವುದು, ಕಾಪಾಡುವುದು ಹಾಗೂ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಬಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರಾದ ರುದ್ರೇಶ ಮಾತನಾಡಿ ಪರಿಸರ ಸಂರಕ್ಷಣೆ ಮನೆಯಲ್ಲಿಯೇ ಆರಂಭವಾಗಬೇಕು.

ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು.ಮಾನವನ ದೈನಂದಿನ ಚಟುವಟಿಕೆಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಜೇನುನೊಣಗಳು ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅವುಗಳ ಸಂರಕ್ಷಣೆ ಮನುಕುಲದ ಉಳಿವಿಗೂ ಅಗತ್ಯವಾಗಿದೆ ಎಂದು ಹೇಳಿದರು.ಐಪಿಎಲ್ನಲ್ಲಿ ‘ಗ್ರೀನ್ ಡಾಟ್ ಬಾಲ್‌’ ಯೋಜನೆಯಡಿ ಪ್ರತಿ ಡಾಟ್ ಬಾಲ್ಗೆ ಗಿಡಗಳನ್ನು ನೆಡುವ ಅಭಿಯಾನ ನಡೆಸಿರುವುದು ಪರಿಸರ ಸಂರಕ್ಷಣೆಗೆ ಉತ್ತಮ ಮಾದರಿಯಾಗಿದೆ. ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಜ್ ಇಂಡಿಯಾ ಕ್ಷೇತ್ರ ಸುಗಮಕಾರರಾದ ರೇಣುಕಾ ಕಹಾರ, ಹಿಂದಿನ ಕಾಲದಲ್ಲಿ ಕಂಡುಬರುತ್ತಿದ್ದ ನೈಸರ್ಗಿಕ ಪರಿಸರ ಇಂದು ಕಡಿಮೆಯಾಗುತ್ತಿದೆ.

ಪರಿಸರ ಮಾಲಿನ್ಯದಿಂದ ಅನೇಕ ರೋಗಗಳು ಹೆಚ್ಚುತ್ತಿವೆ. ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆಯನ್ನು ತ್ಯಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರೇಖಾ ಕಾಳಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಜ್ ಇಂಡಿಯಾ ಸಂಸ್ಥೆಯ ಚಾಲಕರಾದ ಮಂಜು ಎಚ್‌., ಸುನಿತಾ, ಶಾಂಭವಿ, ನಿಲಮ್ಮ, ಭಾರತಿ, ಸಾವಿತ್ರವ್ವ, ಲಕ್ಷ್ಮಿ, ನಿರ್ಮಲಾ, ಸುಮಾ, ನಿರ್ಮಲಾ ಕೆಚ್ಚಣ್ಣವರ, ರೂಪಾ ಪಿ., ರೇಖಾ ಬಾಣಿಕಲ್ಲ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ವೀಣಾ ಮಠದ ಅತಿಥಿಗಳನ್ನು ಸ್ವಾಗತಿಸಿದರು. ಗ್ರಂಥಪಾಲಕರಾದ ಕವಿತಾ ಸೋಮಸಾಗರ ಕಾರ್ಯಕ್ರಮ ನಿರೂಪಿಸಿದರು. ಬಜ್ ಇಂಡಿಯಾ ಕ್ಷೇತ್ರ ಸುಗಮಕಾರರಾದ ದೀಪಾ ವಂದಿಸಿದರು.