ಧಾರವಾಡ - ಹುಬ್ಬಳ್ಳಿ

ಕಾಶಿ ಶ್ರೀ ವಿಜ್ಞಾನ ದೇವ್ ಜೀ ಮಹಾರಾಜರಿಂದ ಹುಬ್ಬಳ್ಳಿ-ಧಾರವಾಡ ಭಕ್ತರಿಗೆ ಆಹ್ವಾನ

ಕಾಶಿ ಶ್ರೀ ವಿಜ್ಞಾನ ದೇವ್ ಜೀ ಮಹಾರಾಜರಿಂದ ಹುಬ್ಬಳ್ಳಿ-ಧಾರವಾಡ ಭಕ್ತರಿಗೆ ಆಹ್ವಾನ

ಲೋಕದರ್ಶನ ವರದಿ 

ಧಾರವಾಡ 25: ಪವಿತ್ರ ಆಧ್ಯಾತ್ಮಿಕ ನಗರ ಕಾಶಿ (ವಾರಾಣಸಿ)ಯಲ್ಲಿ ವಿಹಂಗಮ ಯೋಗ ಸಂಸ್ಥೆ ವತಿಯಿಂದ ವಿಶ್ವದಲ್ಲೇ ಪ್ರಥಮ ಬಾರಿಗೆ 25 ಸಾವಿರ ಹೋಮ ಕುಂಡಗಳ ವಿಶ್ವಶಾಂತಿ ಮಹಾಯಜ್ಞ ಡಿಸೆಂಬರ್ನಲ್ಲಿ ಆಯೋಜಿಸಲಾಗುತ್ತಿದೆ ಎಂದು ವಿಹಂಗಮ ಯೋಗ ಆಶ್ರಮದ ಸಂತ ಶ್ರೀ ವಿಜ್ಞಾನ ದೇವ್ ಜೀ ಮಹಾರಾಜರು ಹೇಳಿದರು.  

ಮಹಾಯಜ್ಞದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸ್ವರ ವೇದ ಸಂದೇಶ ಯಾತ್ರೆ ಕೈಗೊಂಡಿರುವ ಶ್ರೀ ವಿಜ್ಞಾನ ದೇವ್ ಜೀ ಮಹಾರಾಜರು ಶನಿವಾರ ಧಾರವಾಡಕ್ಕೆ ಆಗಮಿಸಿದ್ದರು.  

ನಗರದ ಹುಬ್ಬಳ್ಳಿ ರಸ್ತೆಯ ಚೆನ್ನಬಸವ ತಾಯವ್ವನವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಧ್ಯಾತ್ಮಿಕ ಸಂದೇಶ ನೀಡಿದರು. ವಿಶ್ವಶಾಂತಿಗಾಗಿ ವೈದಿಕ ಹವನ, ಬ್ರಹ್ಮವಿದ್ಯಾ ವಿಹಂಗಮ ಯೋಗದ ಧ್ಯಾನ ಹಾಗೂ ಸಾಧನೆಯ ಮಹತ್ವವನ್ನು ವಿವರಿಸಿದರು.  

ಮಾತನಾಡಿದ ಶ್ರೀ ವಿಜ್ಞಾನ ದೇವ್ ಜೀ ಮಹಾರಾಜರು, “ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಳೆದ 20 ವರ್ಷಗಳಿಂದ ಯಾತ್ರೆ ಮಾಡುತ್ತಿದ್ದೇನೆ. ಭಾರತದ ಪ್ರತಿಯೊಂದು ಮಣ್ಣಿನಲ್ಲೂ ಸನಾತನ ಶಕ್ತಿ ಅಡಗಿದೆ. ಧಾರವಾಡದ ಪವಿತ್ರ ಭೂಮಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದು ಸಂತಸ ತಂದಿದೆ. ಇಲ್ಲಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆ ವಿಶಿಷ್ಟವಾಗಿದೆ” ಎಂದರು.  

“ಸನಾತನ ವಿಹಂಗಮ ಯೋಗದ ಸಂದೇಶ ಸಮಾಜದ ಎಲ್ಲ ವರ್ಗಗಳಿಗೂ ತಲುಪಬೇಕು. ಎಲ್ಲರೂ ಒಗ್ಗೂಡಿ ಸೇವಾ ಕಾರ್ಯಗಳಲ್ಲಿ ತೊಡಗಬೇಕು” ಎಂದು ಅವರು ಕರೆ ನೀಡಿದರು.  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಕೊನೆಯಲ್ಲಿ ಮಹಾಪ್ರಸಾದ ವಿತರಿಸಲಾಯಿತು.  

ಪತಂಜಲಿ ಯೋಗ ಪೀಠ ಕರ್ನಾಟಕದ ರಾಜ್ಯ ಪ್ರಭಾರಿ ಹಾಗೂ ಆಯೋಜನಾ ಸಮಿತಿ ಅಧ್ಯಕ್ಷ ಭವರಲಾಲ್ ಆರ್ಯ ಮಾತನಾಡಿ, ಉತ್ತರ ಪ್ರದೇಶದ ಬಲಿಯಾ ಮೂಲದ ಋಷಿ ಶೃಂಗಿ ವಂಶದಲ್ಲಿ ಜನಿಸಿದ ವಿಜ್ಞಾನ ದೇವ್ ಜೀ ಮಹಾರಾಜರು 17 ವರ್ಷಗಳ ಕಠಿಣ ಧ್ಯಾನ ಮತ್ತು ತಪಸ್ಸಿನ ಬಳಿಕ ಪರಮಾತ್ಮ ಸಾಕ್ಷಾತ್ಕಾರ ಪಡೆದರು. ಕಾಶಿಯಲ್ಲಿ ಬ್ರಹ್ಮವಿದ್ಯಾ ವಿಹಂಗಮ ಯೋಗ ಸಂಸ್ಥೆಯನ್ನು ಲೋಕಕಲ್ಯಾಣಕ್ಕಾಗಿ ಸ್ಥಾಪಿಸಿದ್ದಾರೆ ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಉಪ ಮೇಯರ್ ರತ್ನಾಬಾಯಿ ನಾರಾಯಣ, ಪಾಲಿಕೆ ಸದಸ್ಯ ಶಂಕರ್ ಶಳಕೆ, ವಿಹಂಗಮ ಯೋಗ ಸಂಸ್ಥೆಯ ಪ್ರಚಾರಕರಾದ ನಿತಿನ್ ಅಗರ್ವಾಲ್, ಮುಕ್ತಿ ರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆಯೋಜನಾ ಸಮಿತಿ ಸದಸ್ಯರು ಹಾಗೂ ಪತಂಜಲಿ ಪರಿವಾರದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ