ಸಂಸತ್ನಲ್ಲಿ ಸನಾತನ ಪರಂಪರೆಗೆ ಅವಮಾನ: ವಿಹಿಂಪ ಖಂಡನೆ
ಹುಬ್ಬಳ್ಳಿ: ಸಂಸತ್ ಭವನ ಆವರಣದಲ್ಲಿ ಸಂಸದ ಪಪ್ಪು ಯಾದವ್ ಬ್ರಾಹ್ಮಣ ಪೂಜಾರಿಯ ವೇಷ ಧರಿಸಿ ಪ್ರತಿಭಟನೆ ನಡೆಸಿರುವುದನ್ನು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮುಖಂಡ ಸುಭಾಷ್ ಚಂದ್ರ ಡಂಕ್ ತೀವ್ರವಾಗಿ ಖಂಡಿಸಿದ್ದಾರೆ. ಈ ನಡೆ ಸನಾತನ ಧರ್ಮ, ಬ್ರಾಹ್ಮಣ ಸಮಾಜ ಹಾಗೂ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಅವರು ಆರೋಪಿಸಿದರು. ಧಾರ್ಮಿಕ ಸಂಕೇತಗಳು ಮತ್ತು ವೇಷಭೂಷಣಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಬಾರದು ಎಂದು ಹೇಳಿದ ಅವರು, ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ದೇಶದ ಜನತೆ ಹಾಗೂ ಸನಾತನ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸಂಸತ್ತಿನ ಗೌರವ ಕಾಪಾಡುವುದು ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಅವರು ಹೇಳಿದರು.