2014ರಿಂದಲ್ಲೇ ಭಾರತ ಪೋಲಿಯೋ ಮುಕ್ತ ದೇಶ : ಶ್ವೇತಾ ಬೀಡೀಕರ

2014ರಿಂದಲ್ಲೇ ಭಾರತ ಪೋಲಿಯೋ ಮುಕ್ತ ದೇಶ : ಶ್ವೇತಾ ಬೀಡೀಕರ  India has been a polio-free country since 2014: Shweta Beedikar

ಜಮಖಂಡಿ 28: ದೇಶದಲ್ಲಿ ಶೇ.100ರಷ್ಟು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, 2014ರಿಂದ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ ಹೇಳಿದರು.  

ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ತಾಯಿ-ಮಕ್ಕಳ ಹೆರಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಮಗುವಿಗೆ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.  

"ಸಮಗ್ರ ಲಸಿಕಾ ಅಭಿಯಾನದ ಫಲವಾಗಿ ಭಾರತ ಸಂಪೂರ್ಣ ಪೋಲಿಯೋ ಮುಕ್ತ ದೇಶವಾಗಿದೆ. ಕೋವಿಡ್ ಸಂದರ್ಭದಲ್ಲಿ ಲಸಿಕೆ ಹಾಗೂ ವ್ಯಾಕ್ಸಿನೇಷನ್ ಮೂಲಕ ದೇಶವನ್ನು ಕೋವಿಡ್ನಿಂದ ರಕ್ಷಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ," ಎಂದು ಹೇಳಿದರು.  

ಪೋಲಿಯೋ ಲಸಿಕೆ ನೀಡಲು ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರೂ ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.  

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಕೃಷ್ಣಾ ಬಣ್ಣದ, "ಪೋಲಿಯೋ ಅಂಗವೈಕಲ್ಯ ಉಂಟುಮಾಡುವ ಗಂಭೀರ ಕಾಯಿಲೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತಿದೆ. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದಿರುವ ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದ್ದು, ಮನೆಮನೆಗೆ ತೆರಳಿ ಹಾಗೂ ಭೂತಮಟ್ಟದಲ್ಲಿಯೂ ಲಸಿಕಾ ಕಾರ್ಯ ನಡೆಸಲಾಗುತ್ತಿದೆ," ಎಂದರು.  

ಕಾರ್ಯಕ್ರಮದಲ್ಲಿ ಡಾ. ಎಚ್‌.ಡಿ. ದಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಗೈಬುಸಾಬ ಗಲಗಲಿ, ಜಿಲ್ಲಾ ಸಂಯೋಜಕ ಅಧಿಕಾರಿ ಡಾ. ದಯಾನಂದ ಕರೆನ್ನವರ, ಲಯನ್ಸ್‌ ಕ್ಲಬ್ ಅಧ್ಯಕ್ಷ ದಾನಪ್ಪ ತವನ್ನಗೋಪ್ಪಳ, ಐಎಂಎ ಅಧ್ಯಕ್ಷ ಡಾ. ಎಚ್‌.ಡಿ. ದಡ್ಡಿ, ದಯಾನಂದ ಹನಮ್ಮಕ್ಕನ್ನವರ, ಮಲ್ಲಿಕಾರ್ಜುನ ಜಿರಲಿ, ರಾಜಶೇಖರ ಕೋವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲಕ್ಷ್ಮೀ ಮುಧೋಳಮಠ ಪ್ರಾರ್ಥಿಸಿದರು. ರವಿ ಕಾಂಬಳೆ ಸ್ವಾಗತಿಸಿದರು. ಮಲ್ಲು ಅಸ್ಕಿ ವಂದಿಸಿದರು.