ಮಳೆಯೊಂದಿಗೆ ಬೀಸಿದ ಬಿರುಗಾಳಿ: ಪಾಳಾ ರಸ್ತೆಯಲ್ಲಿ ಉರುಳಿದ ಬೃಹತ್ ಮಾವಿನ ಮರ, ಸಂಚಾರ ಸ್ಥಗಿತ

ಮಳೆಯೊಂದಿಗೆ ಬೀಸಿದ ಬಿರುಗಾಳಿ: ಪಾಳಾ ರಸ್ತೆಯಲ್ಲಿ ಉರುಳಿದ ಬೃಹತ್ ಮಾವಿನ ಮರ, ಸಂಚಾರ ಸ್ಥಗಿತ Heavy rains and storms: Huge mango tree falls on Pala road, traffic disrupted

ಲೋಕದರ್ಶನ ವರದಿ  

ಮುಂಡಗೋಡ 15 : ಕಳೆದ ಕೆಲವು ದಿನಗಳಿಂದ ತೀವ್ರ ಬೇಸಿಗೆಯ ಬಿಸಿಲಿನಿಂದ ಕಂಗಾಲಾಗಿದ್ದ ಮುಂಡಗೋಡ ತಾಲ್ಲೂಕಿನ ಜನತೆಗೆ ಭಾನುವಾರ ಸಂಜೆ ಸುರಿದ ಭಾರೀ ಮಳೆ ಸ್ವಲ್ಪ ಮಟ್ಟಿಗೆ ತಂಪು ನೀಡಿತು. ಆದರೆ ಮಳೆಯೊಂದಿಗೆ ಬೀಸಿದ ಬಿರುಗಾಳಿಯಿಂದ ಕೆಲವೆಡೆ ಅಸ್ತವ್ಯಸ್ತ ಪರಿಸ್ಥಿತಿ ಉಂಟಾಯಿತು. ತಾಲೂಕಿನ ಪಾಳಾ ಗ್ರಾಮದಿಂದ ಹಾನಗಲ್ ಕಡೆಗೆ ಸಾಗುವ ಮುಖ್ಯ ರಸ್ತೆಯಲ್ಲಿ ಬೃಹತ್ ಮಾವಿನ ಮರವೊಂದು ಗಾಳಿಯ ಅಬ್ಬರಕ್ಕೆ ಉರುಳಿ ರಸ್ತೆ ಮಧ್ಯೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತು.  

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಉಂಟಾಗಿ ದಾರಿಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಈ ವೇಳೆ ಇತ್ತೀಚಿನ ದಿನಗಳಲ್ಲಿ ಅಡುಗೆ ಅನಿಲ (ಸಿಲಿಂಡರ್) ಕೊರತೆಯನ್ನು ಎದುರಿಸುತ್ತಿರುವ ಕೆಲ ಸ್ಥಳೀಯರು ರಸ್ತೆಗೆ ಬಿದ್ದಿದ್ದ ಮಾವಿನ ಮರದ ಕೊಂಬೆಗಳನ್ನು ಸೌದೆಗಾಗಿ ಕೊಂಡೊಯ್ಯಲು ಮುಗಿಬಿದ್ದ ದೃಶ್ಯ ಕಂಡುಬಂತು.  

ಸಿಲಿಂಡರ್ ಸಮಸ್ಯೆಯ ನಡುವೆ ಸಿಕ್ಕ ಈ ಮರದ ಕಟ್ಟಿಗೆಯನ್ನು ಸಂಗ್ರಹಿಸಲು ಜನರು ಪೈಪೋಟಿಗೆ ಇಳಿದಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಯಂತ್ರಗಳ ಸಹಾಯದಿಂದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಕತ್ತರಿಸಿ ತೆರವುಗೊಳಿಸಿದರು. ಬಳಿಕ ರಸ್ತೆ ತೆರವುಗೊಳಿಸಿ ವಾಹನ ಸಂಚಾರವನ್ನು ಪುನಃ ಸುಗಮಗೊಳಿಸಲಾಯಿತು.