ಹೃದಯ ರೋಗಗಳ ನಿಯಂತ್ರಣಕ್ಕೆ ಆರೋಗ್ಯಕರ ಜೀವನ ಕ್ರಮ ಮುಖ್ಯ : ಡಾ. ಸಂಜೀವ ಸಜ್ಜನರ ಹೃದಯ ರೋಗ ತಜ್ಞರು

  ಹೃದಯ ರೋಗಗಳ ನಿಯಂತ್ರಣಕ್ಕೆ ಆರೋಗ್ಯಕರ ಜೀವನ ಕ್ರಮ ಮುಖ್ಯ :  ಡಾ. ಸಂಜೀವ ಸಜ್ಜನರ ಹೃದಯ ರೋಗ ತಜ್ಞರು Healthy lifestyle is important for controlling heart diseases: Dr. Sanjeev Sajjanar, cardiologist

ಲೋಕದರ್ಶನ ವರದಿ 

ವಿಜಯಪುರ 11 :  ಹೃದಯ ಮಾನವನ ಬದುಕಿನುದ್ದಕ್ಕೂ ಕಾರ್ಯನಿರ್ವಹಿಸುವ ಅತ್ಯಂತ ಪ್ರಮುಖ ಅಂಗ. ಧೂಮ್ರಪಾನದಿಂದ ದೂರವಿದ್ದು, ಸಮತೋಲಿತ, ಕಡಿಮೆ ಕೊಬ್ಬಿನಂಶವುಳ್ಳ್ಳ ಆಹಾರ, ಕಡಿಮೆ ಉಪ್ಪು ಹಾಗೂ ಸಕ್ಕರೆ ಬಳಸಿ, ನಿತ್ಯ ವ್ಯಾಯಾಮ ವಾಯುವಿಹಾರ, ಯೋಗ ಮಾಡುತ್ತ, ದೇಹದ ತೂಕ ಮಾನಸಿಕ ಒತ್ತಡಗಳನ್ನು ನಿಯಂತ್ರಿಸಿಕೊಂಡು ದಿನ ನಿತ್ಯ 7-8 ತಾಸು ನಿದ್ರೆ ವಿಶ್ರಾಂತಿ ಪಡೆಯುತ್ತ, ಆರೋಗ್ಯಕರ ಜೀವನ ಕ್ರಮದಿಂದ ಹೃದಯ ಕಾಯಿಲೆಗಳಿಂದ ದೂರವಿದ್ದು ಆರೋಗ್ಯಕರವಾಗಿ ಇರಬಹುದು ಎಂದು ಡಾ. ಸಂಜೀವ ಎಲ್‌. ಸಜ್ಜನರ, ಹೃದಯ ರೋಗ ತಜ್ಞರು ಶ್ರೀ ಸಾಯಿ ಕಾರ್ಡಿಯಾಕ್ ಆಸ್ಪತ್ರೆ ವಿಜಯಪುರ ಅವರು ಕರೆಯಿತ್ತರು. 

ಅವರು ಸ್ಥಳೀಯ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೊಬಸ್ ಕ್ಲಬ್ ವಿಜಯಪುರ ಉತ್ತರ, ವತಿಯಿಂದ ಆಯೋಜಿಸಿದ ಮಾಸಿಕ ಸಭೆಯಲ್ಲಿ ಹಿರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು. ತಂಬಾಕು ಸೇವನೆ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ಸಕ್ಕರೆ ಕಾಯಿಲೆ, ಅಧಿಕ ದೇಹ ತೂಕ, ನಿಯಮಿತ ವ್ಯಾಯಾಮ ಮಾಡದಿರುವುದು ಆಹಾರದಲ್ಲಿ ಅಧಿಕ ಕೊಬ್ಬು ಮತ್ತು ಉಪ್ಪು ಬಳಕೆ ಹಾಗೂ ಕೆಲವು ಬಾರಿ ಅನುವಂಶಿಕತೆಯಿಂದ ಹೃದಯ ರೋಗಗಳು / ಹೃದಯಾಘಾತ ಸಮಸ್ಯೆ ಉಂಟಾಗಬಹುದು. ಕಾರಣ ಆರೋಗ್ಯಕರ ಜೀವನ ಕ್ರಮ ಅಳವಡಿಸಿಕೊಳ್ಳುವುದಲ್ಲದೆ, ಹಿರಿಯ ನಾಗರಿಕರು ಆರು ತಿಂಗಳಿಗೊಮ್ಮೆ 1 ವರ್ಷಕ್ಕೊಮ್ಮೆ ಆದರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಓಷದೋಪಚಾರ ಮಾಡಿಸಿಕೊಳ್ಳಲು ಕರೆಯಿತ್ತರು. 

ಹೃದಯಾಘಾತದ ಲಕ್ಷಣಗಳಾದ ಎದೆನೋವು, ಉಸಿರಾಟದ ತೊಂದರೆ, ತೋಳುಗಳು ಕುತ್ತಿಗೆ ಹಾಗೂ ದವಡೆಗಳಲಿನೋವು, ಬೆವರುವಿಕೆ, ಅತೀ ಆಯಾಸ, ತಲೆ ಸುತ್ತುವಿಕೆ ಹೃದಯ ಬಡಿತದಲ್ಲಿ ವ್ಯತ್ಯಾಸ ಕಂಡು ಬಂದರೆ ಆರೋಗ್ಯ ಕಾಪಾಡಿಕೊಳ್ಳಲು ಸಂಪರ್ಕಿಸಿ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇರುವವರು ಹಾಗೂ ಆಗಲೇ ಹೃದಯ ರೋಗ ಚಿಕಿತ್ಸೆ ಪಡೆದವರು ವೈದ್ಯರ ಸಲಹೆಯಂತೆ ಓಷಧಿಗಳನ್ನು ತೆಗೆದುಕೊಳ್ಳುತ್ತ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಹಿರಿಯ ನಾಗರಿಕರು ಕೇಳಿದ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳ ಕುರಿತು ಉತ್ತರ ನೀಡಿದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮಹಾದೇವ ಎಸ್ ಹಾಲಳ್ಳಿ, ಅಧ್ಯಕ್ಷರು ರೋಟರಿ ಪ್ರೊಬಸ್ ಕ್ಲಬ್ ವಿಜಯಪುರ ಉತ್ತರ ಇವರು ವೈದ್ಯರ ಸಲಹೆಯಂತೆ ಆರೋಗ್ಯಕರ ಆಹಾರ, ವಿಹಾರ, ವ್ಯಾಯಾಮ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಿಂದ ಆರೋಗ್ಯಕರವಾಗಿರೋಣ ಎಂದರು. 

ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಎಲ್ಲ ಮಾತೆಯರಿಗೆ ಶುಭಕೋರಿದರು. ಆರಂಭದಲ್ಲಿ ತದ್ದೆವಾಡಿ ಹಾಗೂ ಶ್ರೀ ಬಿ.ಎಸ್‌. ಸಜ್ಜನ ಪ್ರಾರ್ಥನೆ ಸಲ್ಲಿಸಿದರು.   ಸುಭಾಷ ಬೆಟಗೇರಿ ಸ್ವಾಗತಿಸಿದರು. ಶ್ರೀ ಜಗದೀಶ ಮೋಟಗಿ ವಂದಿಸಿದರು. ಡಾ. ಎಸ್‌. ಸಿ. ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು. 

ಈ ಕಾರ್ಯಕ್ರಮದಲ್ಲಿ ಡಾ. ಶಶಿಧರ ಶಿರಹಟ್ಟಿ, ಎಸ್‌. ಜಿ. ನಾಡಗೌಡರ, ಈಶ್ವರಗೊಂಡ, ಎ.ಎಮ್‌. ಸಾವಳಗಿ, ಈರಣ್ಣ ಸೊನ್ನಗಿ, ಅಶೋಕ ಉಪಾಧ್ಯಾಯ, ವಿಠ್ಠಲ ಕಾಳೆ, ಆರ್ . ಜಿ. ಬ್ಯಾಕೋಡ, ಶಿವಣಗಿ, ಈರಣ್ಣ ಚಿಮ್ಮಲಗಿ, ಸುಭಾಷ ಗಜಕೋಶ, ಖಟಾವಿ, ಆಲೂರ , ಗುರಲಿಂಗಪ್ಪ ಬಿರಾದಾರ, ಲಿಂಗದಳ್ಳಿ, ಮುಂತಾದ ಹಿರಿಯ ನಾಗರಿಕರು ಭಾಗವಹಿಸಿದ್ದರು. ವಿಶ್ವ ತಾಯಂದಿರ ದಿನಾಚರಣೆಯ ನಿಮಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳಿಗೆ, ಪುಷ್ಪ ನೀಡಿ ಶುಭಾಶಯ ಕೋರಲಾಯಿತು.