ಹೊಳಲು ಗ್ರಾಮದಲ್ಲಿ ನೋಂದಾಯಿತ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ
ಹೂವಿನಹಡಗಲಿ, ಅ. 8: ವಬಿಜಿ ರಾಮ್ಜಿ ಯೋಜನೆಯಡಿ ತಾಲೂಕಿನ ಹೊಳಲು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪಂಚಾಯಿತಿ ಆವರಣದಲ್ಲಿ ಗುರುವಾರ ನೋಂದಾಯಿತ ಉದ್ಯೋಗ ಖಾತ್ರಿ ಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಾಂತಿ, ಭೇದಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪಿಡಿಒ ಅನ್ನದಾನಿನಾಯ್ಕ್ ಮಾತನಾಡಿ, “ಕೂಲಿಕಾರರು ಬಿಸಿಲಿನ ತಾಪಮಾನದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಸಮಯದ ಕೊರತೆಯಿಂದ ಆರೋಗ್ಯವನ್ನು ನಿರ್ಲಕ್ಷಿಸದೆ, ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಆರೋಗ್ಯ ಸಂರಕ್ಷಣಾಧಿಕಾರಿ ಎರಿಸ್ವಾಮಿ ಮಾತನಾಡಿ, “ಶ್ರಮಿಕರು ಕೇವಲ ದಿನನಿತ್ಯದ ಕೂಲಿಯ ಬಗ್ಗೆ ಗಮನ ಹರಿಸದೆ, ತಮ್ಮ ದೇಹದ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು. ಸಣ್ಣಪುಟ್ಟ ಕಾಯಿಲೆಗಳೆಂದು ನಿರ್ಲಕ್ಷಿಸದೆ ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು,” ಎಂದರು.
ಶಿಬಿರದಲ್ಲಿ ಶ್ರೀ ಫಾಜಿಲ್ ಅಹ್ಮದ್ ಹೊದಿಗೇರಿ, ಐಇಸಿ ಸಂಯೋಜಕರಾದ ಆರ್. ಪ್ರಕಾಶನಾಯ್ಕ, ಡಿಇಒ ಶಿವಯೋಗಿ, ಬಿಎಫ್ಟಿ ಸುನೀತಾ, ಜಿಕೆಎಂ ಶಿಲ್ಪಾ, ಆರೋಗ್ಯ ಇಲಾಖೆಯ ಡಾ. ಮೃತ್ಯುಂಜಯ ಯಲಗಚ್ಚನವರ್ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.
ಅನುಪಮಾ ಗೌಡ, ಪ್ರಿಯಾಂಕಾ ಎಸ್., ಹಾಲಪ್ಪ ಕೆ., ನಾಗಮ್ಮ ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಶಿಬಿರದ ಯಶಸ್ವಿ ನಿರ್ವಹಣೆಗೆ ಸಹಕರಿಸಿದರು.