ಲಾಕ್‌ಡೌನ್ ಚಿಂತಿಸದೆ ತರಾತುರಿಯಲ್ಲಿ ತೆಗೆದುಕೊಂಡ ಆತುರದ ನಿರ್ಧಾರ: ದೇವೇಗೌಡ ಆಕ್ರೋಶ
ಬೆಂಗಳೂರು, ಏ.10,ಲಾಕ್‌ಡೌನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಇದು ಮುಂದಾಲೋಚನೆ ಇಲ್ಲದೆ ಸರಿಯಾಗಿ ಚಿಂತಿಸದೆ ತರಾತುರಿಯಲ್ಲಿ ತೆಗೆದುಕೊಂಡ ಆತುರದ ನಿರ್ಧಾರವಾಗಿದ. ಇದರಿಂದ ರೈತರು ಅತೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ/ದೇಶದಲ್ಲಿ ಆಹಾರ ಪದಾರ್ಥಗಳ ಅಭಾವವು ಉಂಟಾಗಿ ಜನ ದಂಗೆ ಏಳಬಹುದು ಎಂದು ಎಚ್ಚರಿಸಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಇದೇ ರೀತಿ ಮುಂದುವರಿದರೆ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿ ಕೊರೋನಾ ವೈರಾಣುವಿಗಿಂತ ಹೆಚ್ಚಿನ ಅನಾಹುತವಾಗಬಹುದು. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.
ಕರ್ನಾಟಕವು ಕೃಷಿ ಪ್ರಧಾನವಾದ ರಾಜ್ಯ. ಇಂದಿಗೂ ಶೇಕಡಾ 61ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ರಾಜ್ಯದಲ್ಲಿ 78.32 ಲಕ್ಷ ರೈತ ಕುಟುಂಬಗಳಿದ್ದು, ಅದರಲ್ಲಿ 38.49 ಲಕ್ಷ ಅತೀ ಸಣ್ಣ ರೈತ ಕುಟುಂಬಗಳು ಮತ್ತು 21.38 ಲಕ್ಷ ಸಣ್ಣ ರೈತ ಕುಟುಂಬಗಳು ಅಂದರೆ 59.87 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿವೆ. ರಾಜ್ಯದಲ್ಲಿ ಪ್ರತಿ ರೈತ ಕುಟುಂಬದ ಸರಾಸರಿ ಹಿಡುವಳಿ ಕೇವಲ 1.55 ಹೆಕ್ಟೇರ್‌ನಷ್ಟಿದೆ. ರಾಜ್ಯದಲ್ಲಿ 121.61 ಲಕ್ಷ ಹೆಕ್ಟೇರ್‌ನಷ್ಟು ಕೃಷಿಗೆ ಯೋಗ್ಯವಾದ ಭೂಮಿಯಿದ್ದು, ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿ ತೋಟಗಾರಿಕಾ ಬೆಳೆಗಳು ಬಹುಮುಖ್ಯ ಪಾತ್ರವಹಿಸಿದ್ದು, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈಗ 18.7 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದು, ವಾರ್ಷಿಕ ಉತ್ಪಾದನೆ 178 ಲಕ್ಷ ಟನ್‌ಗಳು ರಾಜ್ಯದಿಂದ 2018-19ನೇ ಸಾಲಿನಲ್ಲಿ 11,654 ಕೋಟಿ ರೂ. ಮೌಲ್ಯದ ಕೃಷಿ/ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಇಂದು ತೋಟಗಾರಿಕೆ ಉತ್ಪನ್ನಗಳನ್ನು ಉತ್ಪಾದಿಸುವುದು ಒಂದು ಸಮಸ್ಯೆಯಾಗಿ ಉಳಿದಿಲ್ಲ. ಆದರೆ ಕಷ್ಟಪಟ್ಟು ಬೆಳೆದ ಉತ್ಪನ್ನಗಳನ್ನು ನ್ಯಾಯವಾದ ಬೆಲೆಗೆ ಮಾರಾಟ ಮಾಡಲು ವ್ಯವಸ್ಥಿತ ಹಾಗೂ ಸುಸಜ್ಜಿತ ಮಾರುಕಟ್ಟೆ ಸೌಲಭ್ಯಗಳು ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಪರಿಸ್ಥಿತಿ ಹಾಗೂ ಸಮಯದಲ್ಲಿ ಕೊರೋನಾ ವೈರಾಣುವಿನ ನಿಯಂತ್ರಣಕ್ಕೆ ಕೈಗೊಂಡ ಲಾಕ್‌ಡೌನ್‌ನಿಂದಾಗಿ ರೈತರು ಹತಾಷರಾಗಿ ಕಂಗಾಲಾಗಿದ್ದಾರೆ ಹಾಗೂ ಅವರ ಬದುಕು ಉರಿಯುವ ಬೆಂಕಿಯಲ್ಲಿ ಬಿದ್ದಂತಾಗಿದೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಕೃಷಿ ಕಾರ್ಮಿಕರ, ದಿನಗೂಲಿ ನೌಕರರ ಪಾಲಿಗೆ ಲಾಕ್‌ಡೌನ್ ಮಾಡಿರುವುದು ಮುಂದಾಲೋಚನೆ ಇಲ್ಲದ, ಸರಿಯಾಗಿ ಯೋಚಿಸದೆ ತೆಗೆದುಕೊಂಡ ಆತುರದ ನಿರ್ಧಾರದಂತೆ ಕಾಣಿಸುತ್ತಿದೆ. ದೇಶದಲ್ಲಿ ಕೊರೋನಾ ವೈರಾಣುವಿನ ಸೋಂಕು ಕಾಣಿಸಿಕೊಂಡಿದ್ದು, ಜನವರಿ 30,2020ರಂದು. ಆದರೂ ಸುಮಾರು ಎರಡು ತಿಂಗಳುಗಳ ಕಾಲ ಸುಮ್ಮನಿದ್ದು, ಮುಂದಾಲೋಚನೆ ಇಲ್ಲದೆ ಸರಿಯಾಗಿ ಚಿಂತಿಸದೆ ತರಾತುರಿಯಲ್ಲಿ ತೆಗೆದುಕೊಂಡ ಆತುರದ ನಿರ್ಧಾರದಿಂದ ರೈತರು ಅತೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್ ಮಾಡುವ ಮುನ್ನ ಇದರಿಂದ ರೈತರಿಗೆ, ಕೃಷಿ ಕಾರ್ಮಿಕರಿಗೆ ದಿನಗೂಲಿ ನೌಕರರಿಗೆ ಹಾಗೂ ಇತರರಿಗೆ ಆಗುವ ಸಾಧಕ ಬಾಧಕಗಳ ಬಗ್ಗೆ ಸುದೀರ್ಘವಾಗಿ ರಾಜ್ಯಗಳ ಸರ್ಕಾರಗಳು, ಅನುಭವಿ ಪ್ರಜೆಗಳು, ಕ್ರಿಯಾಶೀಲ ಅಧಿಕಾರಿಗಳು, ಪ್ರಗತಿಪರ ರೈತರು, ರೈತರ ಅಭಿವೃದ್ಧಿಗೆ ರಾಜ್ಯದ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಥಾಪಿಸಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳೊಡನೆ ಸಗಟು ವ್ಯಾಪಾರಸ್ಥರೊಡನೆ ಸುದೀರ್ಘವಾಗಿ ಚರ್ಚಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು. ಆತುರದ ಪೂರ್ವಭಾವಿ ಚಿಂತನೆ ಹಾಗೂ ಸಿದ್ಧತೆಗಳಿಲ್ಲದೆ ತೆಗೆದುಕೊಂಡ ನಿರ್ಧಾರದಿಂದ ರಾಜ್ಯದ ಹಾಗೂ ದೇಶದ ರೈತರು ಕಂಗಾಲಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಎಲ್ಲಾ ಸಂಚಾರವನ್ನು ನಿರ್ಬಂಧಗೊಳಿಸಿದ ಮೇಲೆ ತೋಟಗಾರಿಕೆ ಉತ್ಪನ್ನಗಳನ್ನು ಗ್ರಾಮ ಮಟ್ಟದಲ್ಲೇ ಹಾಲನ್ನು ಸಂಗ್ರಹಿಸುವಂತೆ ಸೂಕ್ತ ಬೆಲೆ ನಿಗದಿ ಮಾಡಿ ಸರ್ಕಾರವೇ ಸಂಬಂಧಪಟ್ಟ ಸಂಘ ಸಂಸ್ಥೆಗಳ ಮುಖಾಂತರ ಕೊಂಡು ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿತ್ತು. ಸದ್ಯಕ್ಕೆ ರಾಜ್ಯದಲ್ಲಿ ತೋಟಗಾರಿಕಾ ಸಹಕಾರಿ ಮಹಾಮಂಡಲ, ಹಾಪ್‌ಕಾಮ್ಸ್, ರಾಷ್ಟ್ರೀಯ ಹೈನು ಅಭಿವೃದ್ಧಿ ಸಂಸ್ಥೆಯ ಸಫಲ್, ಕರ್ನಾಟಕ ಸಹಕಾರಿ ಮಾರಾಟ ಮಹಾಮಮಂಡಲ, ರಾಷ್ಟ್ರಮಟ್ಟದ ನ್ಯಾಪೆಡ್, ಕೇಂದ್ರ ಹಾಗೂ ರಾಜ್ಯಗಳ ಉಗ್ರಾಣಗಳ ಸಂಸ್ಥೆ ಎಪಿಎಂಸಿ ಇವೇ ಮುಂತಾದ ಪ್ರದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ರೈತರಿಂದ ಕೊಳ್ಳಲು ವ್ಯವಸ್ಥೇ ಮಾಡಬೇಕಾಗಿತ್ತು. ಮತ್ತು ಮಾಡಬೇಕು ಎಂದು ದೇವೇಗೌಡ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ನಿಂದ ತೋಟಗಾರಿಕಾ ಉತ್ಪನ್ನಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಏಕೆಂದರೆ ಅವು ಬೇಗ ಬಾಡುವ ಹಾಗೂ ಕೊಳೆತು ಹೋಗುವ ಪದಾರ್ಥಗಳಾಗಿವೆ. ತೋಟಗಾರಿಕಾ ಉತ್ಪನ್ನಗಳ ಎಲ್ಲಾ ಸಂಸ್ಕರಣಾ ಘಟಕಗಳಿಗೂ ಅವುಗಳ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ಪೂರ್ಣ ವಿನಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತೋಟಗಾರಿಕೆ ಉತ್ಪನ್ನಗಳನ್ನು ಜಿಲ್ಲೆಯ, ರಾಜ್ಯದ ಹಾಗೂ ದೇಶದ ಪ್ರದೇಶಕ್ಕೆ ಯಾವುದೇ ಅಡೆತಡೆಗಳಿಲ್ಲದೆ ಸಾಗಾಣಿಕೆ ಹಾಗೂಮಾರುಕಟ್ಟೆಗೆ ಅನುವು ಮಾಡಿಕೊಡಬೇಕು. ತೋಟಗಾರಿಕಾ ಉತ್ಪನ್ನಗಳ ಹಾಗೂ ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ಯಾವುದೇ ನಿರ್ಬಂಧಗಳಿರಕೂಡದು.ಎಲ್ಲಾ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಾರ್ಯಗಳಿಗೆ ಯಾವುದೇ ನಿರ್ಬಂಧವಿರಕೂಡದು
ತೋಟಗಾರಿಕಾ ಉತ್ಪನ್ನಗಳ ವ್ಯವಸ್ಥಿತ ಮಾರುಕಟ್ಟೆಗೆ ನ್ಯಾಷನಲ್ ಗ್ರಿಡ್ ರಚಿಸಬೇಕು.ಇದರಿಂದ ಉತ್ಪಾದನೆ ಹೆಚ್ಚಿರುವ ಪ್ರದೇಶಗಳಿಂದ ಉತ್ಪಾದನೆ ಇರದ/ಬೇಡಿಕೆ ಇರುವ ಪ್ರದೇಶಗಳಿಗೆ ಕಳುಹಿಸುವ ವ್ಯವಸ್ಥೆಯಾಗಬೇಕು. ಇದರಿಂದ ಬೆಳೆಗಾರರಿಗೆ ಹಾಗೂಬಳಕೆದಾರರಿಗೆ ಅನುಕೂಲವಾಗುತ್ತದೆ ಎಂದು ದೇವೇಗೌಡ ಹೇಳಿದ್ದಾರೆ.
ಉದಾಹರಣೆಗೆ ಈ ಹಿಂದೆ ಹಾಪ್‌ಕಾಮ್ಸ್ ಸಂಸ್ಥೆಯಿಂದ ದೆಹಲಿಯಲ್ಲಿರುವ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯ ಹಣ್ಣು/ತರಕಾರಿ ಮಾರಾಟ ಸಂಸ್ಥೆಗೆ ಏಲಕ್ಕಿ, ಬಾಳೆ, ತೆಂಗಿನಕಾಯಿ, ಟೋಮ್ಯಾಟೋ, ದೊಣ್ಣೆ ಮೆನಸಿನಕಾಯಿ ಮುಂತಾದ ಉತ್ಪನ್ನಗಳನ್ನು ಕಳುಹಿಸಿ ಅಲ್ಲಿಂದ ಸೇಬು, ಪ್ಲಮ್, ಪಿಯರ್ಸ್ ಮುಂತಾದ ಉತ್ಪನ್ನಗಳನ್ನು ಇಲ್ಲಿಗೆ ತರಿಸಲಾಗುತ್ತಿತ್ತು. ಈ ಎಲ್ಲಾ ಕಾರ್ಯ/ಮಾರ್ಗ ಸೂಚಿಗಳನ್ನು ಕಾರ್ಯಗತಗೊಳಿಸಿದರೆ ತೋಟಗಾರಿಕಾ ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆಯನ್ನು ಸದ್ಯಕ್ಕೆ ಬಗೆಹರಿಸಲು ಸಾಧ್ಯ. ಇಲ್ಲದಿದ್ದರೆ ರೈತರಿಗೆ ಬೆಳೆಯ ಉತ್ಪಾದನೆಯ ಮೇಲೆ ಸರ್ಕಾರ ಪರಿಹಾರ ಕೊಡಬೇಕು.ಸೂಚಿಸಿರುವ ಮಾರ್ಗಸೂಚಿಸಗಳನ್ನು ಯತಾವತ್ತಾಗಿ ಕಾರ್ಯರೂಪಕ್ಕೆ ತಂದು ಪಾಲನೆ ಮಾಡದೆ ಹೋದರೆ ಹಣ್ಣು-ತರಕಾರಿಗಳ ಉತ್ಪಾದನೆ ಕುಂಠಿತವಾಗಿ ರಾಜ್ಯ/ದೇಶದಲ್ಲಿ ಆಹಾರ ಪದಾರ್ಥಗಳ ಅಭಾವವು ಉಂಟಾಗಿ ಜನ ದಂಗೆ ಏಳಬಹುದು ಹಾಗೂ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿ ಕೊರೋನಾ ವೈರಾಣುವಿಗಿಂತ ಹೆಚ್ಚಿನ ಅನಾಹುತವಾಗಬಹುದು. ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಎಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 