ಮಾಜಿ ಸುಬೇದಾರ್ ಶ್ರೀಶೈಲ್ಯ ಬರಾಗಣಿ ಅವರಿಗೆ ಭವ್ಯ ಸನ್ಮಾನ

ಮಾಜಿ ಸುಬೇದಾರ್ ಶ್ರೀಶೈಲ್ಯ ಬರಾಗಣಿ ಅವರಿಗೆ ಭವ್ಯ ಸನ್ಮಾನ  Great tribute to former Subedar Srishailya Baragani

ಬೀಳಗಿ, 02:  ದೇಶದ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿರ್ವಹಿಸುವ ಸೈನಿಕರ ಸೇವೆ ಅತ್ಯಂತ ಶ್ರೇಷ್ಠವಾದುದು. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ಯೋಧರ ತ್ಯಾಗವನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚರಂತಿಮಠದ ಪೂಜ್ಯ ವೀರಸಂಗಮೇಶ್ವರ ಶಿವಾಚಾರ್ಯರು ಹೇಳಿದರು.  

ತಾಲೂಕಿನ ಮಾರೂತೇಶ್ವರ ದೇವಸ್ಥಾನದ ಆವರಣದಲ್ಲಿ ಸುಬೇದಾರ್ ಶ್ರೀಶೈಲಯ್ಯ ಬರಾಗಣಿ ಅವರ ಸ್ವಾಗತ ಹಾಗೂ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, “ಸಿಯಾಚಿನ್ನಂತಹ ದುರ್ಗಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ ಶ್ರೀಶೈಲಯ್ಯ ಅವರ ಕಾರ್ಯ ಯುವಕರಿಗೆ ಮಾದರಿಯಾಗಿದೆ. ಅವರ ಸೇವಾ ಮನೋಭಾವದಿಂದ ಪ್ರೇರಿತರಾಗಿ ಹೆಚ್ಚಿನ ಯುವಕರು ಸೇನೆ ಸೇರಿ ದೇಶಸೇವೆಗೆ ಮುಂದಾಗಬೇಕು” ಎಂದು ಕರೆ ನೀಡಿದರು.  

ರಾವಿವ ಸಂಘದ ಚೇರ್ಮನ್ ಬಸವರಾಜ ಖೋತ್ ಮಾತನಾಡಿ, “ಮೂರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸುಬೇದಾರ್ ಶ್ರೀಶೈಲಯ್ಯ ಅವರು ರಾಷ್ಟ್ರ ರಕ್ಷಣೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸೇವೆ ಸಮಾಜಕ್ಕೆ ಸದಾ ಪ್ರೇರಣೆಯಾಗಿರುತ್ತದೆ” ಎಂದರು.  

ಗ್ರಾಮ ಮುಖಂಡ ವೆಂಕನಗೌಡ ಪಾಟೀಲ ಮಾತನಾಡಿ, “ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆ, ಶಿಸ್ತು ಮತ್ತು ದೇಶಭಕ್ತಿ ಶ್ಲಾಘನೀಯ. ಇಂತಹ ಸಾಧಕರನ್ನು ಗೌರವಿಸುವುದು ಸಮಾಜದ ಹೆಮ್ಮೆಯ ಸಂಗತಿ” ಎಂದು ಹೇಳಿದರು.  

ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಣ್ಣ ಯಡಹಳ್ಳಿ ಹಾಗೂ ಮಲ್ಲಿಕಾರ್ಜುನ ಪತ್ತಾರ ಮಾತನಾಡಿ, ನಿವೃತ್ತ ಯೋಧರನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದ್ದು, ಅವರ ಅನುಭವಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.