ಗ್ರಾ.ಪಂ. ದೂರದೃಷ್ಟಿ ಯೋಜನೆಗಳ ಕ್ರಿಯಾ ಯೋಜನೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ : ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿ
ಲೋಕದರ್ಶನ ವರದಿ
ಹೂವಿನಹಡಗಲಿ 09: ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒತ್ತು ನೀಡಬೇಕು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾ.ಪಂ. ದೂರದೃಷ್ಟಿ ಯೋಜನೆಗಳಡಿ ಕ್ರಿಯಾಯೋಜನೆ ತಯಾರಿಸುವ ತಾಲೂಕು ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇಚ್ಛಾಸಕ್ತಿಯಿಂದ ಕೆಲಸ ಮಾಡಿದರೆ ಸರ್ಕಾರದ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ಕಾರ್ಯಗತಗೊಳ್ಳುತ್ತವೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿದರೆ ಮಾತ್ರ ಅವು ಸಫಲವಾಗುತ್ತವೆ. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಯಾದಾಗ ಆರ್ಥಿಕತೆಯೂ ಪ್ರಗತಿ ಕಾಣುತ್ತದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಸುಸಜ್ಜಿತ ವಾರದ ಸಂತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಿದ್ದೇವೆ. ಅಗತ್ಯವಿರುವಷ್ಟು ಜಮೀನು ಖರೀದಿಸಿ, ನಗರ ಪ್ರದೇಶಗಳ ಮಾದರಿಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಿದ್ದೇವೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ತಾ.ಪಂ. ಇಒ ಎಸ್.ಎಸ್.ಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಯು.ಹೆಚ್.ಸೋಮಶೇಖರ, ತಾ.ಪಂ. ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ ಇದ್ದರು.