ವ್ಯಸನಮುಕ್ತ ಸಮಾಜಕ್ಕಾಗಿ ಎಲ್ಲರೂ ಶ್ರಮಿಸಬೇಕು : ಸಿದ್ದಣ್ಣ ಮೇಣಿ

ವ್ಯಸನಮುಕ್ತ ಸಮಾಜಕ್ಕಾಗಿ ಎಲ್ಲರೂ ಶ್ರಮಿಸಬೇಕು : ಸಿದ್ದಣ್ಣ ಮೇಣಿ Everyone must strive for an addiction-free society: Siddanna Meni

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 01 : ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಮಾಜದ ಹಿರಿಯರು ಮತ್ತು ಪೋಷಕರು ಈ ಕುರಿತು ಸಂಕಲ್ಪ ಮಾಡಿಕೊಂಡು ಯುವಜನತೆಗೆ ಉತ್ತಮ ಮಾರ್ಗದರ್ಶನ ನೀಡಿದಾಗ ಮಾತ್ರ ಆರೋಗ್ಯಕರ ಹಾಗೂ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ಮೇಣಿ ಹೇಳಿದರು.   

ತಾಲೂಕಿನ ರಾಮಪುರ-ರಬಕವಿಯ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ಇಳಕಲ್ ಮಹಾಂತ ಶ್ರೀಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಯುವಜನರು ಮದ್ಯಪಾನ, ತಂಬಾಕು, ಗುಟ್ಕಾ, ಮಾದಕ ವಸ್ತುಗಳು ಸೇರಿದಂತೆ ವಿವಿಧ ವ್ಯಸನಗಳಿಗೆ ದಾಸರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನದಿಂದ ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಶಾಂತಿ ಹದಗೆಡುತ್ತದೆ. ಆದ್ದರಿಂದ ಶಾಲಾ-ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮನೆಗಳಲ್ಲಿ ಪಾಲಕರು ತಮ್ಮ ಸಂತಾನಗಳಿಗೆ ಸಂಸ್ಕಾರಯುತ ಮೌಲ್ಯಗಳ ಅಳವಡಿಸುವುದು ಅಗತ್ಯವಿದೆ ಎಂದರು. 

ಇಳಕಲ್ ಮಹಾಂತ ಶ್ರೀಗಳು ಸಮಾಜದಲ್ಲಿ ನೈತಿಕತೆ, ಸೇವಾಭಾವ ಹಾಗೂ ಸದಾಚಾರದ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿದ ಮಹನೀಯರು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಇಳಕಲ್ ಮಹಾಂತ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಪ್ರತಿಜ್ಞಾವಿಧಿಯನ್ನು ನೆರವೇರಿಸಲಾಯಿತು. 

ತಹಸೀಲ್ದಾರ್ ಗೀರೀಶ ಸ್ವಾದಿ ಮಾತನಾಡಿ, ವ್ಯಸನಮುಕ್ತ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ಜೀವನದಲ್ಲಿ ಜಾಗೃತಿ ಮೂಡಿಸುವ ಅಭಿಯಾನವಾಗಬೇಕು ಎಂದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಸೇವೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.  ಮುಖ್ಯ ಶಿಕ್ಷಕ ಎ.ಕೆ. ಕಾಡದೇವರ, ಸಾವಿತ್ರಿ ಪವಾಡಶೆಟ್ಟಿ ಮಾತನಾಡಿ, ಕುಟುಂಬ ಮತ್ತು ಶಾಲೆಯ ಸಹಕಾರದಿಂದ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿದರೆ ಭವಿಷ್ಯದ ಸಮಾಜವನ್ನು ಆರೋಗ್ಯಕರವಾಗಿ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.  ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ಕೆ. ಮುಲ್ಲಾ, ಶಿವಾನಂದ ಬಸಗೊಂಡನವರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.