ಹೂವಿನ ಹಡಗಲಿ

ಪರಿಸರ ಮಾಹಿತಿ ಕಾರ್ಯಕ್ರಮ

ಪರಿಸರ ಮಾಹಿತಿ ಕಾರ್ಯಕ್ರಮ

ಹೂವಿನಹಡಗಲಿ 08: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ವತಿಯಿಂದ ಹೂವಿನಹಡಗಲಿಯ ವಲಯದ  ಕಾರ್ಯಕ್ಷೇತ್ರದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಸರಕಾರಿ ಆಸ್ಪತ್ರೆಯ ಆವರಣದಲ್ಲಿ  ಆಯೋಜಿಸಲಾಗಿತ್ತು.  

ಈ ಸಂದರ್ಭದಲ್ಲಿ ಕಾರ್ಯಕ್ರಮ ಕುರಿತು ವಲಯದ ಮೇಲ್ವಿಚಾರಕರಾದ ಜ್ಞಾನದೇವ ಸಿ. ಅವರು ಮಾತನಾಡಿ ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೆ ಅದು ನಮ್ಮನ್ನು ರಕ್ಷಿಸುತ್ತದೆ ಜೊತೆಗೆ ರೋಗರುಜಿನಗಳಿಂದ ದೂರವಾಗಿ ಆರೋಗ್ಯಯುತವಾದ ಜೀವನವನ್ನು ಸಾಗಿಸಬಹುದು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಮಾಗಳ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೋಟೆಪ್ಪ ಈಟಿ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರದಷ್ಟೇ ಉತ್ತಮ ವಾತಾವರಣ ಪರಿಸರವೂ ಕೂಡ ಅಷ್ಟೇ ಮುಖ್ಯವಾಗಿದೆ, ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು, ಪರಿಸರ ಹಾಗೂ ವಾತಾವರಣದ ಸ್ವಚ್ಛತೆಯ ಬಗ್ಗೆ ಅರಿತು ಇತರರಿಗೂ ತಿಳಿಸಿ, ಪರಿಸರವನ್ನು ಸ್ವಚ್ಛವಾಗಿಡುವುದರ ಕಡೆಗೆ  ಗಮನ ಹರಿಸಬೇಕೆಂದು ಹೇಳಿದರು.  

ಪಿಡಿಒ ಮಂಜುನಾಥ್  ಮಾತನಾಡಿ, ಪರಿಸರ ಸ್ವಚ್ಛತೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು  ಸರ್ಕಾರ, ಸಂಘ ಸಂಸ್ಥೆಗಳು, ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ. ಪ್ರತಿಯೊಬ್ಬರೂ ಆರೋಗ್ಯದ ಹಿತದೃಷ್ಟಿಯಿಂದ ಗಮನದಲ್ಲಿಟ್ಟುಕೊಂಡು ಸ್ವಲ್ಪ ಸಮಯವನ್ನು ಪರಿಸರ, ವಾತಾವರಣದ ಸ್ವಚ್ಛತೆಗಾಗಿ ಮೀಸಲಿಡಬೇಕೆಂದು ಹೇಳಿದರು. ಹೆಲ್ತ್‌ ಇನ್ಸ್ಪೆಕ್ಟರ್ ಹಾಲಪ್ಪನವರು ಪರಿಸರದ ಕುರಿತು ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಕುರಿತು ಮಹತ್ವವಾದ ಸಂಗತಿ ತಿಳಿಸಿದರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳು, ಸಿಬ್ಬಂದಿ ವರ್ಗದವರು, ಸೇವಾ ಪ್ರತಿನಿಧಿಗಳಾದ ನೀಲಮ್ಮ, ನಿರ್ಮಲ, ಸಂಗೀತ, ಐಶ್ವರ್ಯ, ಸೇರಿದಂತೆ ಸಂಘದ ಸದಸ್ಯರುಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು. 


ಸುದ್ದಿ ಓದಿ