ವಿದ್ಯಾರ್ಥಿಗಳು ತರಗತಿಗೆ ಗೈರಾಗದಂತೆ ಕ್ರಮವಹಿಸಿ: ಕ್ಷೇತ್ರ ಶಿಕ್ಷಣಾಧಿಕಾರಿ
ಹೂವಿನಹಡಗಲಿ, ಆ.10: ಎಸ್ಎಸ್ಎಲ್ಸಿ ತರಗತಿಗಳಿಗೆ ವಿದ್ಯಾರ್ಥಿಗಳು ಗೈರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ. ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಪ್ರೌಢಶಾಲಾ ಮುಖ್ಯಗುರುಗಳ ಶೈಕ್ಷಣಿಕ ಸಭೆಯಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ವಿಶೇಷ ಗಮನ ಹರಿಸಬೇಕು. ಹೆಚ್ಚಿನ ಅಂಕ ಪಡೆಯುವ ಸಾಧ್ಯತೆ ಇರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿ ರಚಿಸಿ, ಅದರ ದಾಖಲೆಗಳನ್ನು ನಿರಂತರವಾಗಿ ನಿರ್ವಹಿಸಬೇಕು ಎಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ. ಹನುಮಂತಪ್ಪ ಮಾಹಿತಿ ನೀಡಿದರು.
ತಾಲ್ಲೂಕು ದೈಹಿಕ ಪರೀವೀಕ್ಷಕ ರಫಿ ಅಹಮದ್ ಖವಾಸ್ ಪ್ರಸಕ್ತ ಸಾಲಿನ ಕ್ರೀಡಾಕೂಟಗಳ ಆಯೋಜನೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು. ಮುಖ್ಯಗುರುಗಳ ಸಂಘದ ಅಧ್ಯಕ್ಷ ಬಾರಿಕರ್ ಸೂರ್ಯಕಾಂತ್, ಉಪಾಧ್ಯಕ್ಷೆ ಹನಸಿ ಮಂಗಳಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇಸಿಒ ಹಣ್ಣಿ ನರೇಶ್, ಮುಖ್ಯಗುರು ಸುರೇಶ್ ಅಂಗಡಿ ಹಾಗೂ ದ್ವಾರಕೀಶ್ ರೆಡ್ಡಿ ಎಸ್. ಕಾರ್ಯಕ್ರಮ ನಿರ್ವಹಿಸಿದರು.