ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ

ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಭದ್ರತೆ ಮಹಿಳೆಯರಿಗೆ ಹೆಚ್ಚಿನ ಆದ್ಯತೆ  Employment security for rural families and high priority for women in Haveri district

ಲೋಕದರ್ಶನ ವರದಿ 

  ಹಾವೇರಿ 01: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ, ಜನರ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ವಿಕಸಿತ ಭಾರತ್ ಹಿ ಗ್ಯಾರಂಟಿ ಫಾರ್ ಆಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ಹಾವೇರಿ ಜಿಲ್ಲೆಯ ಅರ್ಹ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಖಾತರಿ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.  

ರೂ 24.38 ಕೋಟಿ ಕೂಲಿ ಅನುದಾನ ಬಿಡುಗಡೆ  

 ಯೋಜನೆಯಡಿ ಹಾವೇರಿ ಜಿಲ್ಲೆಗೆ ಈಗಾಗಲೇ ರೂ24.38 ಕೋಟಿ ಕೂಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಎನ್‌ಎಂಎಂಎಸ್  ಆಧಾರಿತ ಹಾಜರಾತಿ ದಾಖಲಿಸಿದ ಬಳಿಕ, ಕಾರ್ಮಿಕರ ಕೂಲಿಯನ್ನು 15 ದಿನಗಳೊಳಗಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮಾ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ದಿನಕ್ಕೆ ರೂ 382 ಕೂಲಿ ಹಿ ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನ  

ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ದಿನಕ್ಕೆ ರೂ382 ಕೂಲಿ ನೀಡಲಾಗುತ್ತದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡುವ ಮೂಲಕ ಲಿಂಗ ಸಮಾನತೆಗೆ ಒತ್ತು ನೀಡಲಾಗಿದೆ. 125 ದಿನಗಳ ಉದ್ಯೋಗ ಪೂರ್ಣಗೊಳಿಸಿದ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ ರೂ47,750 ವರೆಗೆ ಆದಾಯ ಗಳಿಸಬಹುದಾಗಿದೆ.  

ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಗೆ ವಿಶೇಷ ಪ್ರೋತ್ಸಾಹ  

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಯೋಜನೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಒಟ್ಟು ಕಾರ್ಮಿಕರಲ್ಲಿ ಕನಿಷ್ಠ 60 ಶೇಕಡಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿದಲ್ಲಿ, ಮಹಿಳಾ ಕಾರ್ಮಿಕರಿಗೆ ಹೆಚ್ಚುವರಿ 10 ಶೇಕಡಾ ಕೆಲಸದ ರಿಯಾಯಿತಿ ನೀಡುವ ಅವಕಾಶ ಕಲ್ಪಿಸಲಾಗಿದೆ.  

ಮಕ್ಕಳ ಆರೈಕೆ, ಕುಡಿಯುವ ನೀರು ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯ  

ಕೆಲಸದ ಸ್ಥಳದಲ್ಲಿಯೇ ಕಾರ್ಮಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕುಡಿಯುವ ಶುದ್ಧ ನೀರು, ವಿಶ್ರಾಂತಿಗಾಗಿ ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.