ಹೊಸ ಆಟೋ ಪರ್ಮಿಟ್ 5 ವರ್ಷ ಸ್ಥಗಿತಕ್ಕೆ ಆಗ್ರಹ

ಹೊಸ ಆಟೋ ಪರ್ಮಿಟ್ 5 ವರ್ಷ ಸ್ಥಗಿತಕ್ಕೆ ಆಗ್ರಹ  Demand to halt issuance of new auto permits for 5 years


ಕಾರವಾರ 29: ಹೊಸ ಆಟೋರಿಕ್ಷಾಗಳಿಗೆ ಪರ್ಮಿಟ್ ನೀಡುವುದನ್ನು ಐದು ವರ್ಷಗಳ ಕಾಲ ಸ್ಥಗಿತಗೊಳಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಆಟೋರಿಕ್ಷಾ   ಕ್ಷೇಮಾಭಿವೃದ್ಧಿ ಸಂಘ ಸರ್ಕಾರವನ್ನು ಆಗ್ರಹಿಸಿದೆ. ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಮಾತನಾಡಿ, ಆಟೋರಿಕ್ಷಾಗಳ ಪರ್ಮಿಟ್ ವ್ಯಾಪ್ತಿಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ 50 ಕಿ.ಮೀ.ಗೆ ವಿಸ್ತರಿಸಬೇಕು. ಆಟೋ ಚಾಲಕರ ಹಲವು ವರ್ಷಗಳ ಬೇಡಿಕೆಗಳನ್ನು ಜಿಲ್ಲಾಡಳಿತ ಶೀಘ್ರ ಈಡೇರಿಸಬೇಕು ಎಂದು ಒತ್ತಾಯಿಸಿದರು.  

ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಆಟೋರಿಕ್ಷಾಗಳಿದ್ದು, ಶಿರಸಿ ತಾಲೂಕೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಆಟೋಗಳಿವೆ. ಆಟೋಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನಿಲ್ದಾಣಗಳಲ್ಲಿ ಸ್ಥಳಾವಕಾಶದ ಕೊರತೆ, ಸಂಚಾರ ದಟ್ಟಣೆ ಹಾಗೂ ಚಾಲಕರ ಆದಾಯ ಕುಸಿತದ ಸಮಸ್ಯೆ ಎದುರಾಗಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಹೊಸ ಪರ್ಮಿಟ್ಗಳ ವಿತರಣೆಯನ್ನು ನಿಯಂತ್ರಿಸಬೇಕು ಎಂದು ಹೇಳಿದರು. ಎರಡಕ್ಕಿಂತ ಹೆಚ್ಚು ಪರ್ಮಿಟ್ ಹೊಂದಿರುವ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬೇರೆ ಜಿಲ್ಲೆಗಳಲ್ಲಿ ನೋಂದಣಿಯಾಗಿರುವ ಆಟೋಗಳನ್ನು ಖರೀದಿಸಿ ಜಿಲ್ಲೆಯಲ್ಲಿ ಹೊಸ ಪರ್ಮಿಟ್ ಪಡೆಯುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.  

ಸಿಎನ್ಜಿ ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜುಲೈ 7ರಂದು ಮನವಿ ಸಲ್ಲಿಸಲಾಗಿದ್ದು, 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮೊದಲ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಕಾನೂನು ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಗೌರವಾಧ್ಯಕ್ಷ ಆರಿ​‍್ಜ. ನಾಯ್ಕ, ಉಪಾಧ್ಯಕ್ಷರಾದ ವೆಂಕಟೇಶ ನಾಯ್ಕ, ಶ್ರೀಧರ ನಾಯ್ಕ, ಚಂದ್ರಹಾಸ ನಾಯ್ಕ, ಮಹೇಶ ನಾಯ್ಕ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು ಹಾಗೂ ಕಾನೂನು ಸಲಹೆಗಾರ ಭೈರವ ಡಿ. ನಾಯ್ಕ ಉಪಸ್ಥಿತರಿದ್ದರು.