ಕೌಶಲ್ಯದೊಂದಿಗೆ ಶಿಕ್ಷಣ ಬೆಳೆಸಿದರೆ ಜೀವನ ಯಶಸ್ವಿ: ಶಾಸಕ ಪ್ರಕಾಶ್ ಕೋಳಿವಾಡ

ಕೌಶಲ್ಯದೊಂದಿಗೆ ಶಿಕ್ಷಣ ಬೆಳೆಸಿದರೆ ಜೀವನ ಯಶಸ್ವಿ: ಶಾಸಕ ಪ್ರಕಾಶ್ ಕೋಳಿವಾಡ  Combining education with skills leads to a successful life: MLA Prakash Koliwad

ರಾಣೆಬೆನ್ನೂರ 02 : ನಗರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ಅವರು ಮಾತನಾಡಿ, ಕೇವಲ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಪಡೆದರೆ ಸಾಲದು; ವೃತ್ತಿ ಕೌಶಲ್ಯ ಮತ್ತು ನೈಪುಣ್ಯತೆ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.  

ನಗರದ ಆದಿಶಕ್ತಿ ದೇವಸ್ಥಾನದ ಆವರಣದಲ್ಲಿ ಹಿಂದೂ ಲಿಂಗಾಯತ ಪಂಚಮಸಾಲಿ ಸಮಾಜ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಅಪಾರ ಜ್ಞಾನ ಸಂಪತ್ತು ಇದೆ. ಅದನ್ನು ಕೌಶಲ್ಯದೊಂದಿಗೆ ಬಳಸಿಕೊಂಡು ಶಿಕ್ಷಣದ ಗುರಿ ಸಾಧಿಸಬೇಕು ಎಂದರು.  

ಪಿಕೆಕೆ ಇಂಗ್ಲಿಷ್ ಸ್ಪೋಕನ್, ಹೊಸ ತಂತ್ರಜ್ಞಾನ ತರಬೇತಿ ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗೆ ತಮ್ಮ ಅನುದಾನವನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು. ಸಮಾಜದ ಪರಂಪರೆ, ಆಚಾರ-ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.  

ತೆಲಂಗಾಣದ ಜಿಲ್ಲಾಧಿಕಾರಿ ಸಚಿನ್ ಬಿ. ಗುಟ್ಟುರು ಅವರು ಮಾತನಾಡಿ, ಪಾಲಕರು ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಅವರ ಆಸಕ್ತಿ ಮತ್ತು ಗುರಿಗೆ ಅನುಗುಣವಾಗಿ ಪ್ರೋತ್ಸಾಹಿಸಬೇಕು. ನಿರಂತರ ಪ್ರಯತ್ನ ಮತ್ತು ಏಕಾಗ್ರತೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದರು.  

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್ ಮಾತನಾಡಿ, ಸಮಾಜ ನಮಗೆ ಏನು ನೀಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಬದುಕಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ 110ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.