ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯ
ಲೋಕದರ್ಶನ ವರದಿ
ಹೂವಿನಹಡಗಲಿ 21: ಮಾರುಕಟ್ಟೆಯಲ್ಲಿ ಕಡಲೆ ಬೆಲೆಯ ಕುಸಿತವಾಗಿದ್ದರಿಂದ ಕೂಡಲೇ ಸರ್ಕಾರ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ತಾಲೂಕಿನ ಹೊಳಗುಂದಿ ರೈತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಡಲೆ ಬೆಳೆದ ರೈತರು ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆಯಲ್ಲಿ ದರ ಕುಸಿದಿದ್ದು ತೀವ್ರ ಬೇಸರಕ್ಕೆ ಕಾರಣವಾಗಿದೆ.ಆದರೆ ಸಕರ್ಾರ ವಿಜಯನಗರ ಜಿಲ್ಲೆ ಹೊರತು ಪಡಿಸಿ 11ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಿದೆ.ವಿಜಯನಗರ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ್ದು, ರೈತರಲ್ಲಿ ತಾರತಮ್ಯ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಹೂವಿನಹಡಗಲಿ ತಾಲೂಕಿನಲ್ಲಿ ಕಡಲೆ(ಕರೆಕಡ್ಲಿ) ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ಜಾರಿಯಲ್ಲಿದೆ. ಆದರೆ ವಿಜಯನಗರ ಹೊಸ ಜಿಲ್ಲೆ ರಚನೆಯಾದ ನಂತರ ನಮ್ಮ ತಾಲೂಕಿನಲ್ಲಿ ಕಡಲೆ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿಲ್ಲ.ಇದರಿಂದ ಕಳೆದ ಎರಡು ವರ್ಷದಿಂದ ತಾಲೂಕಿನ ರೈತರು ದಲ್ಲಾಳಿಗಳಿಗೆ ಮಾರಾಟ ಮಾಡುವುದರಿಂದ ರೈತರು ತುಂಬಾ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.ಕೂಡಲೇ ಸರ್ಕಾರ ಹೂವಿನಹಡಗಲಿ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಬೇಕೆಂದು ಹೊಳಗುಂದಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.