ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಿ : ಅರಿಹಂತ ಪ್ರಸಾದ

ಸೈಬರ್ ಅಪರಾಧಗಳ ಬಗ್ಗೆ ಜಾಗೃತರಾಗಿರಿ : ಅರಿಹಂತ ಪ್ರಸಾದ Be aware of cyber crimes: Arihant Prasad

ಲೋಕದರ್ಶನ ವರದಿ 

ಧಾರವಾಡ 28 : ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಸೈಬರ್ ಭದ್ರತೆ ಮತ್ತು ಅದರಲ್ಲಿನ ವೃತ್ತಿ ಅವಕಾಶಗಳ ಬಗ್ಗೆ ಅರಿವು ಮೂಡಿಸುವಲ್ಲಿ ಈ ಉಪನ್ಯಾಸವು ಪ್ರಮುಖ ಪಾತ್ರವಹಿಸುತ್ತದೆ. ಇಂಡಿಯನ್ ಅಕಾಡೆಮಿಆಫ್ ಪೀಡಿಯಾಟ್ರಿಕ್ಸ್‌, ಧಾರವಾಡ ಜಿಲ್ಲಾ ಶಾಖೆ ಮತ್ತು ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬಿಸಿಎ, ಎಮ್‌.ಸಿ.ಎ ಮತ್ತು ಎಮ್‌.ಬಿ.,ಎ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ “ಅಂತರರಾಷ್ಟ್ರೀಯ ಸೈಬರ್ ಅಪರಾಧಗಳ ಒಳನೋಟ ಹಾಗೂ ಸೈಬರ್ ಭದ್ರತೆಯಲ್ಲಿ ಅನ್ವೇಷಿಸಬಹುದಾದ ವೃತ್ತಿ ಮಾರ್ಗಗಳು” ಎಂಬ ಉಪನ್ಯಾಸವನ್ನು ಉದ್ಘಾಟಿಸಿ ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದರವರು ಮಾತನಾಡಿದರು.

ಇಂದಿನ ಯುಗವನ್ನು ಡಿಜಿಟಲ್ ಯುಗ ಎಂದು ಕರೆಯಲಾಗುತ್ತದೆ. ನಾವು ಪ್ರತಿದಿನ ಮೊಬೈಲ್, ಇಂಟರ್‌ನೆಟ್, ಸೋಶಿಯಲ್ ಮೀಡಿಯಾ ಮತ್ತು ಆನ್‌ಲೈನ್ ಸೇವೆಗಳನ್ನು ಬಳಸುತ್ತೇವೆ. ಆದರೆ ಇದರ ಜೊತೆಗೇ ಸೈಬರ್ ಅಪಾಯಗಳೂ ಹೆಚ್ಚುತ್ತಿವೆ. ಮೊದಲು ಮನೆಗೆ ಕಳ್ಳರು ಹೊಂಚು ಹಾಕಿ ಬಂದು ಮನೆಯಲ್ಲಿರುವ ಎಲ್ಲ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಇದು ಡಿಜಿಟಲ್ ಯುಗವಾಗಿದ್ದರಿಂದ ಕಳ್ಳರು ಸಹ ಆನ್‌ಲೈನನಲ್ಲಿ ಕಾರ್ಯನಿರತರಾಗಿದ್ದಾರೆ. ಇಲ್ಲಿ ನಾವು ಸ್ವಲ್ಪ ಎಚ್ಚರ ತಪ್ಪಿದರು. ದೊಡ್ಡ ನಷ್ಟವಾಗಬಹುದು. ಆದ್ದರಿಂದ ನಾವು ಕೆಲವು ಮುಖ್ಯ ಜಾಗ್ರತೆಗಳನ್ನು ತೆಗೆದುಕೊಳ್ಳಬೇಕು ಎಂದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಕುಲಕರ್ಣಿ ಉಪನ್ಯಾಸ ನೀಡುತ್ತ ಸೈಬರ್ ಅಪರಾಧಗಳು ಹಲವಾರು ರೀತಿಯ ನಡೆಯುತ್ತಿವೆ, ಅದರಲ್ಲಿ ಫೇಕ್ ಲಿಂಕ ಬಳಸುವ ಮೂಲಕ, ಓ.ಟಿ.ಪಿ ಮುಲಕ ವಂಚನೆ ಮಾಡುವುದು. ಸೋಶಿಯಲ್ ಮೀಡಿಯಾ ಖಾತೆ ಕಳ್ಳತನ ಮಾಡುವುದು ಹೀಗೆ ನಾನು ರೀತಿಯಲ್ಲಿ ವಂಚನೆಗಳು ನಡೆಯುತ್ತಿವೆ. ಬೆಗನೇ ಅರ್ಥವಾಗದಂತಹ ಪಾಸ್‌ವರ್ಡಗಳನ್ನು ಬಳಸಬೇಕು. ಖಚಿತವಾದ ಮಾಹಿತಿಯಿಲ್ಲದೇ ಓ.ಟಿ.ಪಿ ಯಾರಿಗೂ ಹೇಳಬೇಡಿ. ಹಣದ ಆಸೆಗೋ ಅಥವಾ ಇನ್ನಾವುದೋ ಅಸೆಗೆ ಬಿದ್ದು ಅನುಮಾನಾಸ್ಪದ ಲಿಂಕ್‌ಗಳನ್ನು ಬಳಸಬೇಡಿ.

ಸಾರ್ವಜನಿಕವಾಗಿ ವೈಫೈ ಬಳಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಆಂಟಿ ವೈರಸ್ ಬಳಸಿ. ಇವು ಸ್ಕ್ಯಾಮ್‌ನಿಂದ ನಿಮ್ಮನ್ನು ರಕ್ಷಿಸಬಲ್ಲವು ಎಂದು ಸೈಬರ್ ಅಪರಾಧಗಳ ಸ್ವರೂಪ, ಅವುಗಳಿಂದ ಉಂಟಾಗುವ ಅಪಾಯಗಳು, ಅವುಗಳನ್ನು ತಡೆಯುವ ವಿಧಾನಗಳು ಹಾಗೂ ವೈಯಕ್ತಿಕ ಮತ್ತು ಸಂಸ್ಥಾತ್ಮಕ ಮಟ್ಟದಲ್ಲಿ ಅನುಸರಿಸಬೇಕಾದ ಭದ್ರತಾ ಕ್ರಮಗಳ ಬಗ್ಗೆ ಅವರು ವಿವರಿಸಿ, ಸೈಬರ್ ಭದ್ರತೆ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಆಸಕ್ತರಾದವರಿಗೆ ಅಗತ್ಯವಾದ ಕೌಶಲ್ಯಗಳು ಮತ್ತು ವೃತ್ತಿ ಮಾರ್ಗಗಳ ಕುರಿತು ಮಾರ್ಗದರ್ಶನ ನೀಡಿದರು. ವೇದಿಕೆ ಮೇಲೆ ಉಪಪ್ರಾಚಾರ್ಯರು ಹಾಗೂ ಎಂ.ಸಿ.ಎ ಸಂಸ್ಥೆಯ ನಿರ್ದೇಶಕರಾದ ಡಾ. ಸೂರಜ್‌ಜೈನ್, ಧಾರವಾಡ ಜಿಲ್ಲಾ ಶಾಖೆ ಐ.ಎ.ಪಿ. ಅಧ್ಯಕ್ಷರು ಆದ ಡಾ. ಕವನ ದೇಶಪಾಂಡೆ, ಜೆ.ಎಸ್‌.ಎಸ್‌. ಐ.ಟಿ.ಐ ಕಾಲೇಜು ಪ್ರಾಚಾರ್ಯರು ಮಹಾವೀರ ಉಪಾದ್ಯೆ, ಉಪಸ್ಥಿತರಿದ್ದರು. ಡಾ. ಮಂಜುನಾಥ ಪೂಜಾರ ಪರಿಚಯಿಸಿದರು. ಪ್ರೊ. ಬಾಹುಬಲಿ ಚಿವಟೆ ನಿರೂಪಿಸಿದರು. ಪ್ರೊ. ವಿವೇಕ ಲಕ್ಷೇಶ್ವರ ವಂದಿಸಿದರು. ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.