ವಿಜಯನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಮುಖಂಡ ಎಂ.ಬಿ. ಬಸವರಾಜ ಆಗ್ರಹ
ಹೂವಿನಹಡಗಲಿ 21: ವಿಜಯನಗರ ಜಿಲ್ಲೆ ಸೇರಿದಂತೆ ಹೂವಿನಹಡಗಲಿ ತಾಲೂಕಿನಲ್ಲೂ ಈ ಬಾರಿ ಸಮರ್ಕ ಮಳೆಯಾಗದ ಹಿನ್ನೆಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವಿಜಯನಗರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ರಾಜ್ಯ ಸರ್ಕಾರ ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ. ಬಸವರಾಜ ಆಗ್ರಹಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರ ತಕ್ಷಣವೇ ಬೆಳೆ ಹಾನಿ ಸಮೀಕ್ಷೆ ನಡೆಸಿ, ವಿಜಯನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಜೊತೆಗೆ ರೈತರಿಗೆ ಸೂಕ್ತ ಪರಿಹಾರ, ಬೆಳೆ ಹಾನಿ ಪರಿಹಾರ ಧನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ರೈತರ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಅವರು ಮನವಿ ಮಾಡಿದರು.