125 ದಿನಗಳ ಉದ್ಯೋಗ ಖಾತರಿ ಹಿ ವಲಸೆ ತಪ್ಪಿಸಲು ಗ್ರಾಮೀಣ ಕಾರ್ಮಿಕರಿಗೆ ಜಾಗೃತಿ
ಹೂವಿನಹಡಗಲಿ 24: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್ಆರಿ್ಜಎ) ಅಡಿಯಲ್ಲಿ ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತರಿ ಕಲ್ಪಿಸಲಾಗಿದ್ದು, ಉದ್ಯೋಗ ಅರಸಿ ಬೇರೆ ನಗರಗಳಿಗೆ ವಲಸೆ ಹೋಗದೆ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲೂಕು ಐಇಸಿ ಸಂಯೋಜಕ ಪ್ರಕಾಶ ನಾಯಕ್ ಹೇಳಿದರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಆದೇಶದಂತೆ ತಾಲೂಕಿನ ಹಿರೇಮಲ್ಲನಕೆರೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಂಜಿಎನ್ಆರಿ್ಜಎ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಜಿಎನ್ಆರಿ್ಜಎ ಯೋಜನೆಯಡಿ ಗ್ರಾಮದಲ್ಲಿಯೇ ಉದ್ಯೋಗ ದೊರೆಯುತ್ತಿದ್ದು, ದಿನಗೂಲಿ ?370ರಿಂದ ?382ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ, ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ವಿಸ್ತರಿಸಿರುವುದರಿಂದ ಗ್ರಾಮೀಣ ಕಾರ್ಮಿಕರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆಯಿಂದ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಯೋಜನೆ ಕುರಿತು ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ ನಾಯಕ್, ಕಾರ್ಯದರ್ಶಿ ಗುರುಬಸವರಾಜ, ಬಿಎಫ್ಟಿ ವಿಶ್ವನಾಥ, ಡಿಇಒ ಸಂತೋಷ ನಾಯಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.