ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಅಭಿನಯ ಕಾರ್ಯಾಗಾರ ಸಹಕಾರಿ: ಸುಭಾಷ್ ನರೇಂದ್ರ

ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಅಭಿನಯ ಕಾರ್ಯಾಗಾರ ಸಹಕಾರಿ: ಸುಭಾಷ್ ನರೇಂದ್ರ  Acting Workshop for Children's Personality Development Facilitator: Subhash Narendra

ಲೋಕದರ್ಶನ ವರದಿ 

ಹುಬ್ಬಳ್ಳಿ 30: ಅಭಿನಯವು ಕೇವಲ ಮನರಂಜನೆಯ ಮಾಧ್ಯಮವಲ್ಲ, ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಉತ್ತಮ ಮಾರ್ಗವಾಗಿದೆ ಎಂದು ಧಾರವಾಡ ರಂಗಾಯಣದ ವಿಶ್ರಾಂತ ನಿರ್ದೇಶಕ ಸುಭಾಷ್ ನರೇಂದ್ರ ಹೇಳಿದರು.  

ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿ ಗ್ರಾಮದ ಪ್ಲಾಟ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುನಿಧಿ ಕಲಾಸೌರಭ ಸಾಂಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಅಭಿನಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಅಭಿನಯದ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಕಲಾತ್ಮಕ ಕೌಶಲ್ಯಗಳು ಬೆಳೆಯುತ್ತವೆ. ಇಂತಹ ಕಾರ್ಯಾಗಾರಗಳು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಸಹಕಾರಿಯಾಗುತ್ತವೆ ಎಂದರು.  

ಕಾರ್ಯಾಗಾರದ ನಿರ್ದೇಶಕಿ ವೀಣಾ ಅಡವಲೆ ಮಾತನಾಡಿ, ಆಗಸ್ಟ್‌ 5ರವರೆಗೆ ಕಾರ್ಯಾಗಾರ ನಡೆಯಲಿದ್ದು, ಸುಮಾರು 25ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ಅಭಿನಯದ ವಿವಿಧ ಆಯಾಮಗಳ ಜೊತೆಗೆ ಪಠ್ಯಾಧಾರಿತ ನಾಟಕವೊಂದನ್ನು ಸಿದ್ಧಪಡಿಸಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ಮಾಳಗಿ, ಉಪಾಧ್ಯಕ್ಷೆ ಅನಸೂಯಾ, ಪ್ರಭಾರ ಮುಖ್ಯ ಶಿಕ್ಷಕಿ ತ್ರಿವೇಣಿ ಉಪಸ್ಥಿತರಿದ್ದರು. ಭಜಮ್ಮನವರು ಸ್ವಾಗತಿಸಿದರು. ಸರೋಜಾ ಹಾರ್ತಿ ಕಾರ್ಯಕ್ರಮ ನಿರೂಪಿಸಿದರು. ನಾಗರತ್ನ ಭೋವಿ ವಂದಿಸಿದರು.