ದಿ. ಶಂಕರಾನಂದರ ಕೆಲಸಗಳು ಇಂದಿಗೂ ಅಜರಾಮರ : ಸಚಿವ ಜಾರಕಿಹೊಳಿ

ದಿ. ಶಂಕರಾನಂದರ ಕೆಲಸಗಳು ಇಂದಿಗೂ ಅಜರಾಮರ : ಸಚಿವ ಜಾರಕಿಹೊಳಿ The works of D. Shankarananda are still unheeded: Minister Jarkiholi

   ಬೆಳಗಾವಿ, 18 : ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಏಳು ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವರಾಗಿ ಬಿ. ಶಂಕರಾನಂದ ಅವರು ಮಾಡಿದ ಕೆಲಸಗಳನ್ನು ಜನ ಇವತ್ತಿಗೂ ನೆನೆಯುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.  

   ನಗರದ ದಿ. ಬಿ. ಶಂಕರಾನಂದ ವೃತ್ತದಲ್ಲಿ ಕೇಂದ್ರದ ಮಾಜಿ ಸಚಿವ ಬಿ. ಶಂಕರಾನಂದ ಅವರ ಕಂಚಿನ ಪುತ್ಥಳಿ ಅನಾವರಣ ಮಾಡಿ  ಅವರು ಮಾತನಾಡಿದರು. ದೇಶದಲ್ಲಿ ಪ್ರಭಾವಿ ರಾಜಕಾರಣಿಗಳಲ್ಲಿ ದಿ. ಬಿ. ಶಂಕರಾನಂದ ಕೂಡ ಒಬ್ಬರು, ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಖಾಲಿ ಬಿ. ಪಾರ್ಮ್‌ ತಂದಿದನ್ನು ನಾವು ಕೂಡ ನೋಡಿದ್ದೇವೆ. ಶಂಕರಾನಂದ ಅವರು ರಾಜಕೀಯ ಕೊನೆಯ ಹಂತದಲ್ಲಿ ಇದ್ದಾಗ, ನಾವು ರಾಜಕೀಯಕ್ಕೆ ಪ್ರವೇಶ ಮಾಡಿದ್ದೇವೆ. ಹೀಗಾಗಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಹಾಗೂ ಸಕ್ಕರೆ ಕಾರ್ಖಾನೆಗಳ ನಿರ್ಮಾಣಕ್ಕೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ತಿಳಿಸಿದರು.  

   ಬಿ ಶಂಕರಾನಂದ ಅವರ ಪುತ್ಥಳಿ ನಿರ್ಮಾಣದಿಂದ ಯುವ ಪೀಳಿಗೆಗೆ ಮಾದರಿಯಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಶಂಕರಾನಂದ ಅವರನ್ನು ಪರಿಚಯಿಸುವ ಕೆಲಸವಾಗಲಿ, ಅವರ ಕುಟುಂಬಸ್ಥರು ರಾಜಕೀಯಕ್ಕೆ ಬರಲಿ, ಅದಕ್ಕೆ ಬೇಕಾದ ಸಹಾಯ, ಸಹಕಾರವನ್ನು ನಾನು ನೀಡುತ್ತೇನೆಂದು ಇದೇ ವೇಳೆ ಭರವಸೆ ನೀಡಿದರು.  

ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಬಾಕರ ಕೋರೆ ಮಾತನಾಡಿ, ನನ್ನ ಸಹೋದರ ಚಿದಾನಂದ ಕೋರೆ ನಿಧನದ ಬಳಿಕ ನನ್ನನ್ನು ರಾಜಕೀಯಕ್ಕೆ ಕರೆತಂದು ಬೆಳೆಸಿದ್ದಾರೆ. ಶಂಕರಾನಂದ ಅವರು ಕಾಂಗ್ರೆಸ್‌ನಲ್ಲಿ ಪವರ್ ಫುಲ್ ರಾಜಕಾರಣಿಯಾಗಿದ್ದರು. ಚುನಾವಣೆ ವೇಳೆ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳ ಟಿಕೆಟ್‌ಗಳನ್ನು ಅವರೆ ಫೈನಲ್ ಮಾಡಿ ಬಿ-ಪಾರ್ಮ್‌ ಕೊಡುತ್ತಿದ್ದರು.  

ವಿರೋಧ ಪಕ್ಷದವರಿಗೆ ಎಂದೂ ತೊಂದರೆ ಕೊಡಲಿಲ್ಲ. ಪಕ್ಷಾತೀತವಾಗಿ ಸಹಾಯ ಮಾಡುತ್ತಿದ್ದ ಅವರ ಗುಣ ಮಾದರಿಯಾಗಿತ್ತು. ಕರ್ನಾಟಕ ಸೇರಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳ ನೇಮಕದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕೆಎಲ್‌ಇ ಆಸ್ಪತ್ರೆ ನಿರ್ಮಾಣದ ಸಂದರ್ಭದಲ್ಲಿ ಅವರು ನೀಡಿದ ಸಹಕಾರ ಅಪಾರವಾಗಿದೆ ಎಂದು ಬಿ. ಶಂಕರಾನಂದ ಅವರ ಕಾರ್ಯಗಳನ್ನು ಕೊಂಡಾಡಿದರು. 

ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ ಮಾತನಾಡಿ, ರಾಷ್ಟ್ರ ರಾಜಕಾರಣದಲ್ಲಿ ಶಂಕರಾನಂದ ಅವರಿದ್ದಾಗ ನಮಗೆಲ್ಲ ಸೂಕ್ತ ಸ್ಥಾನ ನೀಡಿದ್ದರು. ರೋಣದಿಂದ ಮೊಲ ಬಾರಿಗೆ ನನಗೆ ಟಿಕೆಟ್ ನೀಡಿ ನನ್ನ ಗೆಲುವಿಗೆ ಶ್ರಮಿಸಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂದರು. 

ಬಿ. ಶಂಕರಾನಂದ ಅವರ ಪುತ್ರ ಪ್ರದೀಪ್ ಕಣಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ ಸೇರಿದಂತೆ ದಿ. ಬಿ. ಶಂಕರಾನಂದ ಅವರ ಕುಟುಂಬ, ಜೋಶಿ, ಮಾಜಿ ಶಾಸಕ ಎಸ್‌.ಬಿ. ಘಾಟಗೆ, ಮಾಜಿ ಸಚಿವ ಶಶಿಕಾಂತ ನಾಯಕ ಉಪಸ್ಥಿತರಿದ್ದರು.