ಅನುವಾದದ ಅಂತಿಮ ಗುರಿ ಅನುಸೃಷ್ಟಿ: ಡಾ.ಆರ್‌.ಕೆ. ಕುಲಕರ್ಣಿ

ಅನುವಾದದ ಅಂತಿಮ ಗುರಿ ಅನುಸೃಷ್ಟಿ: ಡಾ.ಆರ್‌.ಕೆ. ಕುಲಕರ್ಣಿ  The Ultimate Goal of Translation is Recreation: Dr. R.K. Kulkarni


ವಿಜಯಪುರ 08 : ಅನುವಾದವೆಂದರೆ ಕೇವಲ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ತರ್ಜುಮೆ ಮಾಡುವುದಲ್ಲ; ಅದು ಅನುಸೃಷ್ಟಿಯ ಸೃಜನಶೀಲ ಕ್ರಿಯೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಆರ್‌.ಕೆ. ಕುಲಕರ್ಣಿ ಅಭಿಪ್ರಾಯಪಟ್ಟರು. ನಗರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಡಾ.ಚನ್ನಪ್ಪ ಕಟ್ಟಿ ಅವರ ‘ಐರಿಶ್ ಜನಪದ ಕತೆಗಳು’ ಮತ್ತು ‘ಪ್ರತಿನುಡಿ’ ಕೃತಿಗಳನ್ನು ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು. ವಿಶ್ವದಾದ್ಯಂತದ ಜನಪದ ಕತೆಗಳು ಸಾಮಾನ್ಯ ಆಶಯಗಳನ್ನು ಹೊಂದಿದ್ದು, ‘ಐರಿಶ್ ಜನಪದ ಕತೆಗಳು’ ಇದನ್ನು ಸಮರ್ಥಿಸುತ್ತವೆ ಎಂದರು. ಪ್ರತಿನುಡಿ ಕೃತಿಯ ಪರಿಚಯ ಮಾಡಿದ ವಿಶ್ರಾಂತ ಪ್ರಾಚಾರ್ಯ ಡಾ.ಜಿ.ಆರ್‌.ಕುಲಕರ್ಣಿ, ಕಟ್ಟಿ ಅವರ ವ್ಯಾಪಕ ಅಧ್ಯಯನ ಹಾಗೂ ಸಮಚಿತ್ತದ ವಿಮರ್ಶೆಗೆ ಈ ಕೃತಿ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು. ನೆಲೆ ಪ್ರಕಾಶನದ ಸಂಸ್ಥಾಪಕ ಸದಸ್ಯ ಡಾ.ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್‌.ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ಚಿದಂಬರ ಬಂಡಗರ ಸ್ವಾಗತಿಸಿದರು. ದೇವೂ ಮಾಕೊಂಡ ವಂದಿಸಿದರು. ಡಾ.ಎಸ್‌.ಕೆ.ಕನ್ನೂರ ಕಾರ್ಯಕ್ರಮ ನಿರೂಪಿಸಿದರು.