ಸಚಿವ ಶಿವರಾಜ ತಂಗಡಗಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡನೆ

ಸಚಿವ ಶಿವರಾಜ ತಂಗಡಗಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡನೆ  Condemnation of derogatory remarks against Minister Shivaraj Tangadagi

ಲೋಕದರ್ಶನ ವರದಿ  

ಸಿಂದಗಿ, ಸೆ. 08: ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಅವಹೇಳನಕಾರಿ ಹಾಗೂ ಏಕವಚನದ ಪದಗಳನ್ನು ಬಳಸಿ ಮಾತನಾಡಿರುವುದನ್ನು ಭೋವಿ ಸಮಾಜದ ತಾಲೂಕು ಅಧ್ಯಕ್ಷ ಪಂಡಿತ ಯಂಪೂರೆ ತೀವ್ರವಾಗಿ ಖಂಡಿಸಿದ್ದಾರೆ.  

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಶಿವರಾಜ ತಂಗಡಗಿ ಅವರು ಭೋವಿ ಸಮಾಜದ ಮುಖಂಡರಾಗಿದ್ದು, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ನಾಯಕನ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.  

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರು ಸಚಿವ ಶಿವರಾಜ ತಂಗಡಗಿ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿರುವುದು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಆದ್ದರಿಂದ ಶಾಸಕ ಜನಾರ್ದನ ರೆಡ್ಡಿ ಅವರು ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುವುದರ ಜತೆಗೆ, ಬಳಸಿರುವ ಅವಹೇಳನಕಾರಿ ಪದಗಳಿಗೆ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.  

ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ರಾಜಕೀಯ ಜೀವನದಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ನಿಂದನಾತ್ಮಕ ಹಾಗೂ ಅವಾಚ್ಯ ಪದಗಳ ಬಳಕೆ ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ; ಅದು ಅವರ ಸಮಾಜ ಹಾಗೂ ಬೆಂಬಲಿಗರ ಭಾವನೆಗಳಿಗೂ ಧಕ್ಕೆ ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.  

ಇಂತಹ ಅವಹೇಳನಕಾರಿ ಹೇಳಿಕೆಗಳಿಗೆ ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಉಗ್ರ ಸ್ವರೂಪದ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದು ಗ್ಯಾರಂಟಿ ಸಮಿತಿ ಸದಸ್ಯೆ ಸುನಂದಾ ಯಂಪೂರೆ ಎಚ್ಚರಿಕೆ ನೀಡಿದ್ದಾರೆ.