ಹೂವಿನಹಡಗಲಿ ಸಂಭ್ರಮದ ಶ್ರೀಗವಿಸಿದ್ದೇಶ್ವರ ರಥೋತ್ಸವ
ಲೋಕದರ್ಶನ ವರದಿ
ಹೂವಿನಹಡಗಲಿ 11: ಪಟ್ಟಣದ ಶ್ರೀಗವಿಸಿದ್ದೇಶ್ವರ ಸ್ವಾಮಿಯ 28ನೇ ವರ್ಷದ ರಥೋತ್ಸವ ಶುಕ್ರವಾರ ಸಂಜೆ 5.30ಕ್ಕೆ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದಿಂದ ಪುಷ್ಪಾಲಂಕೃತ ಪಲ್ಲಕ್ಕಿಯ ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದ ಸ್ವಾಮಿಯ ಉತ್ಸವ ಮೂರ್ತಿ ಮೂರು ಸುತ್ತು ಪ್ರದಕ್ಷಣಿ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥಕ್ಕೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.
ಬಿಜೆಪಿ ಮುಖಂಡರಾದ ಓದೋಗಂಗಪ್ಪ 1.90 ಲಕ್ಷ ರೂ ಸ್ವಾಮಿಯ ನಿಶಾನೆಯನ್ನು,ಎಂ.ಚಂದ್ರಶೇಖರ ರುದ್ರಾಕ್ಷಿ ಮಾಲೆಯನ್ನು ಪಡೆದರು ನಂತರ ಬೃಹತ್ ಹೂಮಾಲೆ,ತಳಿರು ತೋರಣಗಳಿಂದ ಸಿಂಗರಿಸಿದ್ದ ರಥವು ಶಾರದಮ್ಮ ಈಟಿ ಶಂಭುನಾಥ ರಥೋತ್ಸವಕ್ಕೆ ಚಾಲನೆ ನೀಡಿದರು. ವೈಭವದಿಂದ ಸಾಗಿ ಬರುತ್ತಿದ್ದಂತೆ ರಥ ಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ನಂತರ ರಥೋತ್ಸವ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಥಕ್ಕೆ ತೆಂಗಿನ ಕಾಯಿ,ಉತ್ತತ್ತಿ,ಬಾಳೆ ಹಣ್ಣು ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ನಂದಿಕೋಲು,ಸಮಾಳ,ಮಂಗಳ ವಾಧ್ಯಗಳ ವೈಭವ ರಥೋತ್ಸವಕ್ಕೆ ಮೆರುಗು ತಂದಿತು.
ರಥವು ಪಾದಗಟ್ಟಿ ತಲುಪಿ. ಮೂಲ ಸ್ಥಳಕ್ಕೆ ಹಿಂದಿರುಗುತ್ತಿದ್ದಂತೆ ಭಕ್ತರು ಚಪ್ಪಳೆ ತಟ್ಟಿ ಹರ್ಷದಿಂದ ಸಂಭ್ರಮಿಸಿದರು.ದೇವಸ್ಥಾನದಲ್ಲಿ ಸ್ವಾಮಿಗೆ ಬೆಳಿಗ್ಗೆಯಿಂದಲೇ ಭಕ್ತಾಧಿಗಳು ವಿಶೇಷ ಪೂಜೆ ಸಲ್ಲಿಸಿದರು. ಹೂವಿನಹಡಗಲಿ, ಸುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆಗಳ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮೀಯ ಆಶೀರ್ವಾದ ಪಡೆದರು. ಈ ವೇಳೆ ಲಿಂಗನಾಯ್ಕನಹಳ್ಳಿ ಚನ್ನವೀರಸ್ವಾಮೀಜಿ, ಡಾ.ಹಿರಿಶಾಂತವೀರಸ್ವಾಮೀಜಿ,ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಚಿದಾನಂದ ಸ್ವಾಮೀಜಿ, ಚನ್ನಬಸವಸ್ವಾಮೀಜಿ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮೈನಳ್ಳಿ ಸಿದ್ದೇಶ್ವರ ಸ್ವಾಮೀಜಿ, ಇಟ್ಟಿಗಿ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಅಳವಂಡಿ ಸಿದ್ದಲಿಂಗ ಸ್ವಾಮೀಜಿ, ಹಿರೇವಡ್ಡಟ್ಟಿಯ ವೀರೇಶ್ವರ ಸ್ವಾಮೀಜಿ, ರಾಖೇಶಯ್ಯ ಭಾಗವಹಿಸಿದ್ದರು.ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಯಿತು.