ಮಲ್ಲಿಗೆ ನಾಡಲ್ಲಿ ಹೋಳಿ ಸಂಭ್ರಮ ; ಬಣ್ಣದಲ್ಲಿ ಮಿಂದೆದ್ದ ಜನತೆ
ಲೋಕದರ್ಶನ ವರದಿ
ಹೂವಿನಹಡಗಲಿ 05: ತಾಲ್ಲೂಕಿನಾದ್ಯಂತ ಹೋಳಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಯುವಕರು ಬೀದಿ ಬೀದಿಯಲ್ಲಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿಕೊಂಡು ರಂಗಿನಾಟದಲ್ಲಿ ತೊಡಗಿದ್ದರು. ಮಕ್ಕಳು ಬಣ್ಣದ ನೀರಿನ ಸ್ಯಾಸೆಗಳನ್ನು ಹಿಡಿದು ಎರಚುತ್ತಾ ಓಣಿ ಅಂಗಳದಲ್ಲಿ ಓಡಾಡಿದರು. ಮಹಿಳೆಯರು, ಯುವತಿಯರು ಕೂಡ ವಿಧ ವಿಧದ ಬಣ್ಣದಲ್ಲಿ ಮಿಂದೆದು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬಾಂಧವ್ಯ ಬೆಸೆಯುವ ಹೋಳಿ ಹಬ್ಬವನ್ನು ಪಟ್ಟಣದ ಯುವಕರು ತೇರು ಹನುಮಪ್ಪ ದೇವಸ್ಥಾನ ಬಳಿ ಸಾಮೂಹಿಕವಾಗಿ ಆಚರಿಸಿದ್ದರಿಂದ ಹೋಳಿ ಆಚರಣೆಗೆ ವಿಶೇಷ ಮೆರಗು ಬಂದಿತ್ತು. ಯುವಕರು ಬಣ್ಣ ತುಂಬಿದ ಗಡಿಗೆ ಹೊಡೆಯುವ ಸ್ಪರ್ಧೆ ಆಯೋಜಿಸಿ ಸಂಭ್ರಮಿಸಿದರು.ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆಯ ಅಂಗಡಿ ಮುಂಗಟ್ಟೆಗಳು ಮುಚ್ಚಲ್ಪಟ್ಟಿದ್ದವು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.ಹೋಳಿ ಹುಣ್ಣಿಮೆ ಪ್ರಯುಕ್ತ ಮಂಗಳವಾರ ರಾತ್ರಿ ಹಿಂದೂ ಯುವಶಕ್ತಿಯ ಪದಾಧಿಕಾರಿಗಳು ಹಾಗೂ ಹಿಂದೂ ಸಂಘಟನೆಗಳು ಪಟ್ಟಣದ ಮುಖ್ಯ ಬೀದಿಯಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಸಿದರು. ಬೆಳಗಿನ ಜಾವ ಕಾಮನಕಟ್ಟೆಯ ಬಳಿ ಸಾಂಪ್ರದಾಯಿಕವಾಗಿ ಕಾಮ ದಹನ ನಡೆಸಲಾಯಿತು.