ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ಪರಿಶ್ರಮ ಅಗತ್ಯ: ಪ್ರೊ. ಎಂ. ಮುನಿರಾಜು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿಗೆ ಪರಿಶ್ರಮ ಅಗತ್ಯ: ಪ್ರೊ. ಎಂ. ಮುನಿರಾಜು  Hard work is essential for success in competitive exams: Prof. M. Muniraju

ಲೋಕದರ್ಶನ ವರದಿ

ಬಳ್ಳಾರಿ, ಸೆ. 29: ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಶ್ರೀಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.  

ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮೂರು ದಿನಗಳ ಕೆ-ಸೆಟ್, ನೆಟ್ ಹಾಗೂ ಗೇಟ್ ಪರೀಕ್ಷೆಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರಸ್ತುತ ಜಗತ್ತಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯದಲ್ಲಿ ಮೂರು ಆಧುನಿಕ ಕಂಪ್ಯೂಟರ್ ಲ್ಯಾಬ್ಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.  

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗದಿದ್ದರೂ ಸಾಧಿಸುವ ಛಲವನ್ನು ವಿದ್ಯಾರ್ಥಿಗಳು ಎಂದಿಗೂ ಕೈಬಿಡಬಾರದು. ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.  

ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವಿ. ಲೋಕೇಶ್, ವಿಭಾಗದ ಡಾ. ಪದ್ಮನಾಭ ರೆಡ್ಡಿ, ಡಾ. ನೀಲೂಫರ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ತುಮಕೂರು ವಿಶ್ವವಿದ್ಯಾಲಯದ ಡಾ. ಎಚ್‌.ಎಸ್‌. ಬೋರೇಗೌಡ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಡಾ. ಎಸ್‌. ಕುಂಬಿ ನರಸಯ್ಯ ಉಪಸ್ಥಿತರಿದ್ದರು.  

ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಶ್ವಿನ್ ಕುಮಾರ್, ಡಾ. ಅನಿತಾ, ಡಾ. ಸರಸ್ವತಿ, ವಿಭಾಗದ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.