ಮನಕೆ ಮುದ ನೀಡುವ ಪ್ರಬಂಧಗಳು

ಕನ್ನಡ ಸಾಹಿತ್ಯದಲ್ಲಿ ಇಂದು ಪ್ರಕಾಶನಗೊಳ್ಳುತ್ತಿರುವ  ಕಥೆ, ಕವನ. ಲೇಖನ, ನಾಟಕ, ಲಲಿತ ಪ್ರಬಂಧ ಸಂಕಲನಗಳನ್ನು ಗಮನಿಸಿದಾಗ ಲಲಿತ ಪ್ರಬಂಧಗಳನ್ನು ಬರೆಯುವವರು ಕಾಣಸಿಗುವುದು ತುಂಬ ವಿರಳವೆಂಬುದು ಗೊತ್ತಾಗುತ್ತದೆ. ರಾ.ಕು. ಪಾ.ವೆಂ. ಎನ್ಕೆ, ರಾ.ಯ. ಧಾರವಾಡಕರ,  ಶ್ರೀನಿವಾಸ ವೈದ್ಯ, ಅ.ರಾ. ಮಿತ್ರ, ಅನಂತ ಕಲ್ಲೋಳ ಹೀಗೆ ಮುಂದುವರೆದು ಎಚ್. ಡುಂಡಿರಾಜ, ಎಂ. ಎಸ್. ನರಸಿಂಹಮೂತರ್ಿ, ಭುವನೇಶ್ವರಿ ಹೆಗಡೆ, ಎಲ್. ಎಸ್ ಶಾಸ್ತ್ರಿ, ಡಾ. ಗುರುದೇವಿ ಹುಲೆಪ್ಪನವರಮಠ ನಂತರದಲ್ಲಿ ವಿಜಯೀಂದ್ರ ಪಾಟೀಲ, ವಸುಧೇಂದ್ರ ಲಲಿತ ಪ್ರಬಂಧದಲ್ಲಿ ಎಲ್ಲರ ಗಮನ ಸೆಳೆದರು. ಇತ್ತೀಚಿನ ಬರಹಗಾರರಲ್ಲಿ ಆರತಿ ಘಟಿಗಾರ, ಗುಂಡೇನಟ್ಟಿ ಮಧುಕರ ಮುಂತಾದವರ ಲಲಿತ ಪ್ರಬಂಧಗಳು ಕಾಣಸಿಗುತ್ತವೆ. 

         ಸಹೋದರಿ  ನೀತಾ ರಾವ್ ಅವರ "ಹತ್ತನೇ ಕ್ಲಾಸಿನ ಹುಡುಗಿಯರು" ಲಲಿತ ಪ್ರಬಂಧ/ ನಗೆಬರೆಹಗಳ ಸಂಕಲನ ವಿವಿಧ ವಿಷಯಗಳನ್ನೊಳಗೊಂಡ 24 ಲಲಿತ ಪ್ರಬಂಧ ಹಾಗೂ 11 ನಗೆ ಬರೆಹಗಳನ್ನೊಳಗೊಂಡ ಕೃತಿಯನ್ನು ಹೊರತರುವ ಮೂಲಕ ಈ ಅಪರೂಪ ಗದ್ಯ ಪ್ರಕಾರವಾದ ಲಲಿತ ಪ್ರಬಂಧ ಬರಹಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಸಂಕಲನದಲ್ಲಿ  ಬರುವ 'ಬದಲಾದ ಕಾಲ  ಮರೆತುಹೋದ ಚಟುವಟಿಕೆಗಳು' 'ಮನೆಗಳಿಗೆ ಹಿತ್ತಲುಗಳಿಲ್ಲ 'ಹಳೇ ಸಿನೆಮಾ ಹಳೇ ಥೇಟರ್  'ಕಟ್ಟೆಯಿರಲವ್ವ ಮನೆ ತುಂಬ'  ಮುಂತಾದ ಹೆಚ್ಚಿನ ಲಲಿತ ಪ್ರಬಂಧಗಳು  ನಮ್ಮ ಪರಂಪರೆ ಮತ್ತು ಆಧುನಿಕ ಜೀವನ ಶೈಲಿಯ ತಳಹದಿಯ ಮೇಲೆ ರಚಿತಗೊಂಡವುಗಳಾಗಿವೆ. ನಮ್ಮನ್ನು ನಾಲ್ಕು ದಶಕಗಳ ಹಿಂದಿನ ಜೀವನ ಪದ್ಧತಿಯನ್ನು  ಕಣ್ಣ ಮುಂದೆ ತರುತ್ತವೆ. ಕಣ್ಣಿಗೆ ಕಟ್ಟುವಂತಹ  ನೀತಾ ರಾವ್ ಅವರ ಬರವಣಿಗೆ ಓದುಗನನ್ನು ತನ್ನೊಳಗೆ ಸೆಳೆದುಕೊಂಡು ಬಿಡುತ್ತದೆ.  

        ಕೃತಿ ತಲೆಬರಹದ 'ಹತ್ತನೇ ಕ್ಲಾಸಿನ ಹುಡುಗಿಯರು' ಲಲಿತ ಪ್ರಬಂಧದಲ್ಲಿ ಲೇಖಕಿ ಹೈಸ್ಕೂಲನಲ್ಲಿ  ಹತ್ತನೇ ತರಗತಿಯಲ್ಲಿ ಓದುತ್ತಿರುವಾಗಿನ ಮೋಜು, ಮಸ್ತಿಗಳನ್ನು ನಯವಾದ ಹಾಸ್ಯದೊಂದಿಗೆ ಹಂಚಿಕೊಂಡಿದ್ದಾರೆ. ಕ್ಲಾಸ್ ಮಾನಿಟರ್, ಗದ್ದಲ ಮಾಡುವವರನ್ನು ಸುಮ್ಮನೇ ಕೂಡ್ರಿಸುವಲ್ಲಿ ಹರಸಾಹಸ ಮಾಡುತ್ತಾಳಾದರೂ ಗದ್ದಲ ಮಾಡುವವರು ಶಾಂತರಾಗುವುದಿಲ್ಲ ಇದರಿಂದ ಕೋಪಗೊಂಡ ಕ್ಲಾಸ್ ಮಾನಿಟರ್ "ನಾನು ಕ್ಲಾಸ್ ಮಾನಿಟರ್ ಇಲ್ಲೇ ದೆವ್ವಿನ್ಹಂಗ ನಿಂತೇನಿ ನಿಮಗೇನರ ಖಬರ ಅದ ಏನು?" ಎಂದು ಜೋರು ಮಾಡಿದಾಗ ಗುಂಪಿನಿಂದ ಬಂದ ಧ್ವನಿಯೊಂದು "ದೆವ್ವ ಕಣ್ಣಿಗೆ ಕಾಣಂಗಿಲ್ರಿ, ಅದಕ್ಕ ಗದ್ದಲಾ ಹಾಕಾಗತ್ತಿದಿವ್ರಿ ಎಂದು ಜೋರಾಗಿ ಹೇಳಿದಾಗ. ಕ್ಲಾಸ್ ರೂಮು ನಗೆಯಿಂದ ಪ್ರತಿಧ್ವನಿಸಿತು. ಇಂಥ ಅಪರೂಪದ ನಗೆ ಪ್ರಸಂಗಗಳು ಓದುಗರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತವೆ. 

       ಲೇಖಕಿ ನೀತಾ ರಾವ್  'ಗಣಪತಿ ಬಪ್ಪಾ ಮೋರಯಾ' ಲಲಿತ ಪ್ರಬಂಧದಲ್ಲಿ ಬೆಳಗಾವಿಯಲ್ಲಿ ನಡೆಯುವ ಸಾರ್ವಜನಿಕ ಗಣಪತಿ ಹಬ್ಬದ ಸಡಗರ, ಸಂಭ್ರಮದ ಚಿತ್ರವಿದ್ದರೆ 'ಉಡುಗೊರೆಯೇ ಆಶೀವರ್ಾದ' ಲಲಿತ ಪ್ರಬಂಧದಲ್ಲಿ ಕೌಟುಂಬಿಕ ಕಾರ್ಯಕ್ರಮದಲ್ಲಿ ನಡೆಯುವ ಉಡುಗೊರೆ ಅವಾಂತರಗಳ ಚಿತ್ರೆಣವಿದೆ. ಉದಯೋನ್ಮುಖ  ಲೇಖಕರು ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸಿ ಪ್ರಕಟಗೊಳ್ಳದಾಗ ಪಡುವ ನಿರಾಶೆ. ಪ್ರಕಟಗೊಂಡಾಗಿನ ಸಂಭ್ರಮ ಹೀಗೇ ಲೇಖಕರ ಸಮರಸವನ್ನು 'ಪ್ರಿಯ ಸಂಪಾದಕರೆ!' ಪ್ರಬಂಧದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಹೀಗೆ ಬೇರೆ, ಬೇರೆ ವಿಷಯಗಳನ್ನೊಳಗೊಂಡ ಪ್ರಬಂಧಗಳನ್ನು ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿದ್ದಾರೆ. ಅವುಗಳನ್ನು ಓದಿಯೇ ಆನಂದಿಸಬೇಕು. 

          ಲಲಿತ ಪ್ರಬಂಧ, ಹರಟೆ ಹಾಗೂ ನಗೆ ಬರೆಹ ಒಡಹುಟ್ಟಿದ ಅಣ್ಣ ತಮ್ಮಂದಿರು ಇದ್ದಂತೆ. ಅದರಲ್ಲಿಯೂ ಲಲಿತ ಪ್ರಬಂಧ ಹಾಗೂ ಹರಟೆ ಅವಳಿಜವಳಿ ಇದ್ಸಂತೆ.  ಇವುಗಳನ್ನು ಗುರುತಿಸುವುದು ತುಂಬ ಕಷ್ಟ. ನೀತಾ ರಾವ್ ಅವರ 'ಹತ್ತನೇ ಕ್ಲಾಸಿನ ಹುಡುಗಿಯರು' ಈ ಕೃತಿಯಲ್ಲಿ ಭಾಗ ಒಂದರಲ್ಲಿ ಲಲಿತ ಪ್ರಬಂಧಗಳಿದ್ದರೆ ಎರಡನೇ ಭಾಗದಲ್ಲಿ ಹಾಸ್ಯ ಲೇಖನಗಳಿವೆ. 'ಮಧ್ಯಮ ತಾನಧಮನು' ನಗೆಬರಹ ನನಗೆ ತುಂಬ ಇಷ್ಟವಾಯಿತು. ಈ ನಗೆಬರಹ ಓದುಗನನ್ನು ನಗಿಸುವುದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಎಡಪಂಥಿ, ಬಲಪಂಥಿಯ ಗುಂಪುಗಾರಿಕೆ ಹೇಗೆ ಅನಿವಾರ್ಯತೆಯಾಗುತ್ತಲಿವೆ ಎಂಬುದನ್ನು ವಿಡಂಬಿಸಿದ್ದಾರೆ. ಲೇಖಕ ಅಥವಾ ಲೇಖಕಿ  ಕೇವಲ ಒಳ್ಳೆಯ ಬರಹಗಾರನಾಗಿದ್ಸರೆ ಸಾಲದು  ಹಣೆಪಟ್ಟಿಯ ಇರಲೇಬೇಕಾದ ದುರಂತ ಇಂದು ಸಾಹಿತ್ಯಕ್ಚೇತ್ರದಲ್ಲಿದೆ ಎಂದು ಲೇಖಕಿ ನೀತಾ ಹಳಹಳಿಸಿದ್ದಾರೆ.'ಅಂಟಿಯ ಆಲವತ್ತುಗಳು' 'ಸ್ಥಾನ (ಪಲ್ಲಟ) ಮಹಾತ್ಮೆ 'ಪಾಲರ್ೆಜಿ ಬಿಸ್ಕಿಟ್ - ಕಾಲ್ಗೇಟ್ ಟೂಥಪೇಸ್ಟು"ಕ.ಪಿ.ಗಳ ಸ್ವರ ಸಾಫ್ಟ್ ಪರ'  ನಗೆಬರಹಗಳು ನನಗಿಷ್ಟವಾದವು. 

          ಕೃತಿಯ ಮುಖಪುಟದ ಕಲೆ ಚೆನ್ನಾಗಿದೆ. ಆದರೆ ಕೃತಿಯ ಶಿಷರ್ಿಕೆಯಡಿಯಲ್ಲಿ ಲಲಿತ ಪ್ರಬಂಧ, ನಗೆಬರಹಗಳು ಎಂಬುವದನ್ನು ನಮೂದಿಸಿದ್ದರೆ ಆಸಕ್ತರು ಗುರುತಿಸಲು ಇನ್ನು ಹೆಚ್ಚಿನ ಅನಕೂಲವಾಗುತ್ತಿತ್ತು. ಇನ್ನು ಈ ಕೃತಿಗೆ ಬೇರೆಯವರಿಂದ ಬರೆಯಿಸಿದ ಮುನ್ನುಡಿ, ಬೆನ್ನುಡಿಗಳು ಏಕಿಲ್ಲವೆಂಬ ಅನವಶ್ಯಕ ಪ್ರಶ್ನೆ ನನ್ನನ್ನು ಬಹುವಾಗಿ ಕಾಡಿತು.  

           ಕೃತಿಗಾತರ್ಿ ನೀತಾ ರಾವ್ ಅವರಲ್ಲಿ ಓದುರನ್ನು ಸೆರೆ ಹಿಡಿಯುವ ಶೈಲಿಯಿದೆ. ಇನ್ನೂ ಬೇರೆ ಬೇರೆ ವಿಷಯಗಳತ್ತ  ತಮ್ಮ ಗಮನ ಹರಿಸಲಿ. 

ಇನ್ನೂ ಲಲಿತ ಪ್ರಬಂಧವಾಗದ ಹಲವಾರು ವಿಷಯಗಳಿವೆ ಅವುಗಳನ್ನು ಗುರುತಿಸಿ ಲಲಿತ ಪ್ರಬಂಧಗಳನ್ನು ರಚಿಸಲೆಂಬುದು ನನ್ನ ಹಾರೈಕೆ. ಓದುಗರು ಕೊಂಡು ಓದಿ, ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಪ್ರೋತ್ಸಾಹಿಸಲೆಂದು ಆಶಿಸುತ್ತೇನೆ.

- ಗುಂಡೇನಟ್ಟಿ ಮಧುಕರ 

       ಮೊ. 944809358