ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ: ಹಾವೇರಿಯಲ್ಲಿ ಜಾಬ್ ಕಾರ್ಡ್‌ ಮೇಳ

ಗ್ರಾಮೀಣ ಉದ್ಯೋಗಕ್ಕೆ ಉತ್ತೇಜನ: ಹಾವೇರಿಯಲ್ಲಿ ಜಾಬ್ ಕಾರ್ಡ್‌ ಮೇಳ  Boosting Rural Employment: Job Card Mela in Haveri

ಲೋಕದರ್ಶನ ವರದಿ 

  ಹಾವೇರಿ, ಆ.19: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ನಗರ ಪ್ರದೇಶಗಳತ್ತ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಹಾವೇರಿ ಜಿಲ್ಲೆಯಾದ್ಯಂತ ಆಗಸ್ಟ್‌ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್‌ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್‌ಕುಮಾರ್ ತಿಳಿಸಿದ್ದಾರೆ.  

ಹಾವೇರಿ ತಾಲ್ಲೂಕಿನ ಕುಳೆನೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ 175 ಕೂಲಿಕಾರರೊಂದಿಗೆ ಸಂವಾದ ನಡೆಸಿದ ಅವರು, ಹೊಸ ಯೋಜನೆಯಡಿ ನಿರಂತರ ಕೂಲಿ ಕೆಲಸ ಒದಗಿಸುವುದರ ಜೊತೆಗೆ ಕೂಲಿ ಹಣವನ್ನು ನಿಗದಿತ ಅವಧಿಯಲ್ಲಿ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.  

ಜುಲೈ 1, 2026ರಿಂದ ಆರಂಭಗೊಂಡಿರುವ ವಿಕಸಿತ  ಫಾರ್ ರೋಜ್‌ಗಾರ್ ಆಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯಡಿ ನೋಂದಾಯಿತ ಹಾಗೂ ಇ-ಕೆವೈಸಿ ಪೂರ್ಣಗೊಳಿಸಿರುವ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಗ್ರಾಮೀಣ ಕುಟುಂಬಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು, ಉದ್ಯೋಗ ಸೃಷ್ಟಿಸುವುದು ಹಾಗೂ ಆರ್ಥಿಕ ಭದ್ರತೆ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.  

ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ನೆರವಾಗುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಪ್ರತಿ ದಿನ ಕನಿಷ್ಠ 5 ಲಕ್ಷ ಮಾನವ ದಿನಗಳಂತೆ ತಿಂಗಳಿಗೆ ಒಟ್ಟು 1.50 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.