ವರಮಹಾಲಕ್ಷ್ಮೀ ಹಬ್ಬದ ವೈಭವದ ಪೂಜೆಯ ಸಡಗರ ಸಂಭ್ರಮ

ವರಮಹಾಲಕ್ಷ್ಮೀ ಹಬ್ಬದ ವೈಭವದ ಪೂಜೆಯ ಸಡಗರ ಸಂಭ್ರಮ  The grandeur and festive spirit of the Varamahalakshmi Puja


ಲಕ್ಷ್ಮೇಶ್ವರ 21: ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಭಕ್ತರ ಮನೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬದ ಪೂಜಾ ಸಂಭ್ರಮ ಕಂಡುಬಂತು. ಪಟ್ಟಣದ ವೀರಣ್ಣ ಶಿವಪ್ಪ ಹಡಪದ ಅವರ ಮನೆಯಲ್ಲಿ ವಿಶೇಷವಾಗಿ ಅಲಂಕರಿಸಿದ ಮಂಟಪದಲ್ಲಿ ಕಲಶ ಪ್ರತಿಷ್ಠಾಪಿಸಿ, ಲಕ್ಷ್ಮೀ ದೇವಿಯನ್ನು ಆವಾಹಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.  

ಶ್ರಾವಣ ಮಾಸದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮೀ ವ್ರತಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಅಷ್ಟಲಕ್ಷ್ಮೀಯರನ್ನು ಧನ, ಧಾನ್ಯ, ಐಶ್ವರ್ಯ, ಭೋಗ, ಜ್ಞಾನ ಹಾಗೂ ಸುಖ-ಸಮೃದ್ಧಿಯ ರೂಪದಲ್ಲಿ ಪೂಜಿಸಿ, ಮನೆಗೆ ಸುಖ-ಶಾಂತಿ ಮತ್ತು ಸಮೃದ್ಧಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸಿದರು.  

ಮನೆಗಳಲ್ಲಿ ಮಂಟಪ ನಿರ್ಮಿಸಿ, ಕಲಶದಲ್ಲಿ ಲಕ್ಷ್ಮೀ ದೇವಿಯನ್ನು ಆವಾಹಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆಗೆ ಮುನ್ನ ವಿಘ್ನನಿವಾರಕ ಗಣಪತಿಯನ್ನು ಪೂಜಿಸಿ, ಬಳಿಕ ಲಕ್ಷ್ಮೀ ದೇವಿಗೆ ಕಡಲೆಬೇಳೆ ಪಾಯಸ, ಹೋಳಿಗೆ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಅರ​‍್ಿಸಲಾಯಿತು.  

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ಪೂಜೆಯ ಬಳಿಕ ಮಹಿಳೆಯರಿಗೆ ಅರಿಶಿಣ, ಕುಂಕುಮ, ಬಾಗಿನ ಹಾಗೂ ಹಣ್ಣು-ದಕ್ಷಿಣೆ ನೀಡಿ, ಹಬ್ಬದ ಆಶೀರ್ವಾದ ಪಡೆಯುವ ಸಂಪ್ರದಾಯವೂ ಕಂಡುಬಂತು.