‘ಸಾರ್ವಜನಿಕರಲ್ಲಿ ಪರಿಸರದ ಮಹತ್ವ, ಅರಿವು ಅತೀ ಅಗತ್ಯ’

‘ಸಾರ್ವಜನಿಕರಲ್ಲಿ ಪರಿಸರದ ಮಹತ್ವ, ಅರಿವು ಅತೀ ಅಗತ್ಯ’ 'Public awareness of the importance of the environment is essential'

ಲೋಕದರ್ಶನ ವರದಿ 

ಧಾರವಾಡ 08:  ಸಮಾಜದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ಎಲ್ಲರೂ ಪರಿಸರದ ಮಹತ್ವ, ಅರಿವು ಮತ್ತು ಜಾಗೃತಿ ಹೊಂದುವುದು ಅತೀ ಅಗತ್ಯ. ಈ ದಿಶೆಯಲ್ಲಿ ಸಂಘ, ಸಂಸ್ಥೆಗಳು, ಶಾಲಾ, ಕಾಲೇಜುಗಳು ಅರಿವು   ಅಭಿಯಾನ ಹಮ್ಮಿಕೊಳ್ಳುವುದು ಅತ್ಯಗತ್ಯ ಎಂದು ಧಾರವಾಡ ಅಪರ ಜಿಲ್ಲಾಧಿಕಾರಿ ಸಿ. ಡಿ. ಗೀತಾ ಹೇಳಿದರು. 

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ‘ಕೃಷಿ ಹಾಗೂ ಪರಿಸರ ಮಂಟಪ’ದ ವತಿಯಿಂದ ವಿಶ್ವ ಪರಿಸರ ದಿನಾಚರಣೆ-2026 ರ ಅಂಗವಾಗಿ ಶಿವಾಜಿ ಸರ್ಕಲ್ ನಲ್ಲಿಯ ಕೆ.ಇ. ಬೋರ್ಡ ಪದವಿ ಮಹಾವಿದ್ಯಾಲಯದ ಎನ್‌.ಎಸ್‌.ಎಸ್‌. ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಸಸಿ ನೆಡುವ ಅಭಿಯಾನ’ ಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.  

ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸ್ಥಳೀಯ ಸಂಘ, ಸಂಸ್ಥೆಗಳು, ಶಾಲಾ, ಕಾಲೇಜುಗಳು ಮುಂದೆ ಬಂದಲ್ಲಿ ಜಿಲ್ಲಾಡಳಿತದಿಂದ ಸಹಕಾರ ನೀಡಲಾಗುವುದು ಎಂದರು. 

ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಎ. ಸಿದ್ಧಾಂತಿ ಮಾತನಾಡಿ,  ಪರಿಸರವನ್ನು ಸಂರಕ್ಷಿಸಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ದಿಶೆಯಲ್ಲಿ ತಮ್ಮ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ಸಸಿ ನೆಟ್ಟು ಬೆಳೆಸಿ, ಪೋಷಿಸಿದ ಕುರಿತು ತಮ್ಮ ಅನುಭವ ಹಂಚಿಕೊಂಡರು. 

ಕೃಷಿ ಮತ್ತು ಪರಿಸರ ಮಂಟಪದ ಸಂಚಾಲಕ ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕೃಷಿ ಮತ್ತು ಪರಿಸರ ಮಂಟಪದಿಂದ ಮುಂಬರುವ ದಿನಗಳಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಹಮ್ಮಿಕೊಳ್ಳುವ ಮೌಲಿಕ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.    

ಸತೀಶ ತುರಮರಿ, ವಿಶ್ರಾಂತ ಆಯ್‌.ಎಫ್‌.ಎಸ್‌. ಅಧಿಕಾರಿ ಕಿನ್ನಾಳ. ಎನ್‌.ಎಸ್‌.ಎಸ್‌. ಘಟಕದ ಸಂಯೋಜನಾಧಿಕಾರಿ ಈಶ್ವರರಾವ್ ಕರಾತ. ಡಾ. ಮೋಹನಕುಮಾರ ಥಂಬದ. ಪ್ರೊ. ಎನ್‌. ಆರ್‌. ಬಾಳಿಕಾಯಿ, ಡಾ. ಅಶೋಕ ಕೋರಿ.  ಚನ್ನುಗೌಡ ಪಾಟೀಲ. ಡಾ. ರಾಮಚಂದ್ರ. ನಾಗರಾಜ ಹೂಗಾರ. ಶ್ರೀಮತಿ ಸುನೀತ ಪುರೋಹಿತ. ವಕೀಲರಾದ ಸಿ. ಎಂ. ಜಾಲಾದಿ. ಆರ್‌. ವಿ. ದೇಶಪಾಂಡೆ ಮತ್ತು ಆನಂದ ಎಲಿಗಾರ. ಶಿವಪ್ಪ ಗಾಣಿಗೇರ. ವಿದ್ಯಾ ಕುಲಕರ್ಣಿ ಸೇರಿದಂತೆ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.