ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಜರುಗಿದ ಚಿಗುರು ಕಾರ್ಯಕ್ರಮ

ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಜರುಗಿದ ಚಿಗುರು ಕಾರ್ಯಕ್ರಮ  'Chiguru' program held at Kalakeri Sangeeta Vidyalaya

ಲೋಕದರ್ಶನ ವರದಿ 

ಧಾರವಾಡ 30: ಮಕ್ಕಳಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ವೇದಿಕೆ ಕಲ್ಪಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕಾದದ್ದು ಇಂದಿನ ಅಗತ್ಯತೆಯಾಗಿದೆ ಎಂದು ಸ್ವರ ಸಾಮ್ರಾಟ ಪಂ. ಬಸವರಾಜ ರಾಜುಗುರು ಟ್ರಸ್ಟಿನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರುವ ಹೇಳಿದರು.  

ಧಾರವಾಡ ತಾಲ್ಲೂಕು ಕಲಕೇರಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ವತಿಯಿಂದ ಇಂದು (ಜು.30) ರಂದು ಬೆಳಗ್ಗೆ ಕಲಕೇರಿ ಸಂಗೀತ ವಿದ್ಯಾಲಯದ ಸಭಾಂಗಣದಲ್ಲಿ ಏರಿ​‍್ಡಸಿದ್ದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯಂತ ಕ್ರಿಯಾಶೀಲವಾಗಿ ಆಯೋಜಿಸುತ್ತಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು, ಯುವಕರು ಪಾಲ್ಗೊಳ್ಳುವ ಮೂಲಕ ಇಂತಹ ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವ್ಹಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಅಧ್ಯಕ್ಷರಾದ ಬಿ ಮಾರುತಿ ಅವರು ಬದುಕಿಗೆ ಕಲೆ ಅಗತ್ಯ. ಅನಗತ್ಯ ಮೊಬೈಲ ಬಳಕೆಗೆ ಕಡಿವಾಣ ಹಾಕಿ, ಮಾನಸಿಕ ನೆಮ್ಮದಿ ನೀಡುವ ಸಂಗೀತ, ನೃತ್ಯ ಚಿತ್ರಕಲೆಗಳತ್ತ ನಮ್ಮ ಬಾಲಕರು, ಯುವಕರು ಗಮನ ಹರಿಸಬೇಕು ಎಂದರು.

ಮತ್ತೊರ್ವ ಮುಖ್ಯ ಅತಿಥಿಗಳಾದ ರಂಗಭೂಮಿಯ ಹಿರಿಯ ಕಲಾವಿದರಾದ ವೀರಣ್ಣ ಪತ್ತಾರ ಮಾತನಾಡಿ ಎಲ್ಲ ಕಲೆಗಳ ಮೂಲಬೇರು ಜಾನಪದ ಕಲೆ. ದೊಡ್ಡಾಟಗಳಂತಹ ಜಾನಪದ ಕಲೆಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಅಭಿನಂದನಾರ್ಹ ಎಂದರು.  

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಕೇರಿ ಸಂಗೀತ ವಿದ್ಯಾಲಯ ಮಂಡಳಿಯ ಸದಸ್ಯರಾದ ರಶ್ಮಿ ಶಿರಹಟ್ಟಿ ಅವರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಮಕ್ಕಳು ನಾಡಿನಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮೂಂಚೂಣಿಯಲ್ಲಿರುವಂತೆ ಮಕ್ಕಳಿಗೆ ಕರೆ ನೀಡಿದರು. 

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಪ್ರಾಸ್ತಾವಿಕ ಮಾತನಾಡಿ,  ಸ್ವಾಗತಿಸಿದರು.  ಕಾರ್ಯಕ್ರಮದಲ್ಲಿ ಕಲಕೇರಿ ಸಂಗೀತ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ರೂಪಾಲಿ ಅವರಗೇರಿಮಠ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರತಿ ದೇವಶಿಖಾಮನಿ ನಿರೂಪಣೆ ಮಾಡಿದರು.  

ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಕೇರಿ ಸಂಗೀತ ವಿದ್ಯಾಲಯದ ಕು.ಬಸವನೆವ್ವಾ ಉಪ್ಪಾರ ಮತ್ತು ವೃಂದದವರಿಂದ ನಾಡಗೀತೆ ಹಾಗೂ ಅಂಕಿತಾ ಮಲ್ಲಿಗವಾಡ ಮತ್ತು ವೃಂದದವರಿಂದ ಸುಗಮ ಸಂಗೀತ ನಡೆಸಿಕೊಟ್ಟರು.

ಸಾತ್ವಿಕ್ ಮಹಾಮನೆ ಮತ್ತು ವೃಂದದವರಿಂದ ಶಾಸ್ತ್ರೀಯ ಸಂಗೀತ, ತನುಶ್ರೀ ಕಟ್ಟಿಸಂಗಾವಿ ಮತ್ತು ತಂಡದವರಿಂದ ಜಾನಪದ ಗೀತೆಗಳು, ವೈಷ್ಣವಿ ಭಟ್ ಧಾರವಾಡ ಇವರಿಂದ ಭರತನಾಟ್ಯ, ಸ್ವಾತಿ ಬಡಿಗೇರ ಮತ್ತು ತಂಡದವರಿಂದ ದೊಡ್ಡಾಟ ಹಾಗೂ ಪ್ರಾರ್ಥನಾ ಅರಿವೇಡ್ ಮತ್ತು ತಂಡದವರು ಜಾನಪದ ಸಮೂಹ ನೃತ್ಯ ಪ್ರದರ್ಶನ ನೀಡಿದರು.