ಬಸ್ತವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಬಸ್ತವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ World Environment Day celebrated in Bastawada Gram Panchayat

ಲೋಕದರ್ಶನ ವರದಿ 

ಬೆಳಗಾವಿ, ಜೂನ್ 06: ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು.  ತಾಲ್ಲೂಕಿನ ಬಸ್ತವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಅರಣ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಕೇವಲ ಗಿಡಗಳನ್ನು ನೆಡುವುದಷ್ಟೇ ನಮ್ಮ ಕೆಲಸವಲ್ಲ, ಅವುಗಳನ್ನು ಮರಗಳಾಗಿ ಬೆಳೆಸುವವರೆಗೆ ಪೋಷಿಸುವುದು ಮುಖ್ಯವಾಗಿದೆ. ಗ್ರಾಮದ ಪ್ರತಿಯೊಂದು ಯುವ ಪೀಳಿಗೆಯು ಪರಿಸರ ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬಸವರಾಜ ಹೆಗ್ಗನಾಯಕ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಆನಂದ ಪಾಟೀಲ, ಪಿಡಿಒ ಆಶಾ ಎಸ್‌., ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.