ಚಿಕ್ಕೋಡಿ

ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕೋಡಿ 07 : ಸಕಲ ಜೀವಿಗಳ ಜೀವನಾಡಿಯಾಗಿರುವ ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪರಿಸರ ರಕ್ಷಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ವರ್ಷಪೂರ್ತಿ ನಡೆಯಬೇಕು ಎಂದು ಚೌಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಂದ್ರನಾಥ ಟಿ. ಚೌಗುಲೆ ಹೇಳಿದರು.ಸ್ಥಳೀಯ ಚೌಸನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, "ಕಾಡಿದ್ದರೆ ನಾಡು, ಹಸಿರಿದ್ದರೆ ಉಸಿರು" ಎಂಬ ಮಾತಿನಂತೆ ನಮ್ಮ ಆರೋಗ್ಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ.

ಒಂದು ಮರ ಸಾವಿರ ಜೀವಿಗಳಿಗೆ ಆಸರೆಯಾಗಿದ್ದು, ಗಿಡಮರಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಗೌರವ ಅತಿಥಿಯಾಗಿ ಭಾಗವಹಿಸಿದ್ದ ಚೌಸನ್ ನರ್ಸರಿ ಶಾಲೆಯ ನಿರ್ದೇಶಕಿ ಸವಿತಾ ಹೆಗಡೆ ಮಾತನಾಡಿ, ಪರಿಸರವು ಮಾನವ ಜೀವನದ ಆಧಾರವಾಗಿದ್ದು, ಶುದ್ಧ ಗಾಳಿ, ನೀರು, ಮಣ್ಣು ಹಾಗೂ ಜೀವ ವೈವಿಧ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ಪ್ರಾಧ್ಯಾಪಕರಾದ ಡಾ. ಕನಕಾಚಲ ಕನಕಗಿರಿ ಹಾಗೂ ಡಾ. ನಂದಕುಮಾರ್ ಸಿಂಧೆ ಪರಿಸರ ದಿನಾಚರಣೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು.ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ತನುಜಾ ಎಸ್‌. ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.  

ಇದೇ ಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ "ಜೀವ ವೈವಿಧ್ಯತೆ ಮತ್ತು ಜಾಗತಿಕ ತಾಪಮಾನ ಹಿ ಶಿಕ್ಷಕರ ಪಾತ್ರ" ವಿಷಯದ ಕುರಿತು ಚರ್ಚಾಗೋಷ್ಠಿ ನಡೆಯಿತು. ಇದರಲ್ಲಿ ಪ್ರಶಿಕ್ಷಣಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ. ಚೌಗುಲೆ, ಉಪನ್ಯಾಸಕ ಎಂ.ಎಚ್‌. ರಾವತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅನಿತಾ ಪೋತದಾರ ಪ್ರಾರ್ಥಿಸಿದರು. ಮಾರುತಿ ನಿಕ್ಕಂ ಸ್ವಾಗತಿಸಿದರು. ಸ್ವಾತಿ ಕೊಳಿ ವಂದಿಸಿದರು. ಅನುಷುಯ ಖಾನಾಪುರ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ