ಕುಂಗಟೊಳ್ಳಿ-ಹತ್ತರವಾಟ-ಖಜಗೌಡನಹಟ್ಟಿ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ
ಚಿಕ್ಕೋಡಿ 01 : ಗ್ರಾಮೀಣ ಜನರ ಬೇಡಿಕೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಕ್ಷೇತ್ರದ ಜನರ ಬೇಡಿಕೆ ಈಡೇರಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ರಾಯಬಾಗ ವಿಧಾನಸಭಾ ಮತಕ್ಷೇತ್ರದ ಚಿಕ್ಕೋಡಿ ತಾಲೂಕಿನ ಕುಂಗಟೋಳ್ಳಿ, ಹತ್ತರವಾಟ ಹಾಗೂ ಖಜಗೌಡನಟ್ಟಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕುಂಗಟೋಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 20ಲಕ್ಷ, ಖಜಗೌಡನಟ್ಟಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಲಕ್ಷ ಹಾಗೂ ಹತ್ತರವಾಟ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ?50 ಲಕ್ಷ ಸೇರಿದಂತೆ ಒಟ್ಟು 75 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಈ ಕಾಮಗಾರಿಗಳಿಂದ ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ಹನುಮಾನ ಏತ ನೀರಾವರಿ ಯೋಜನೆ ಜಾರಿಗಾಗಿ ಪ್ರಯತ್ನ ನಡೆಯುತ್ತಿದೆ. ನೀರಿನ ಲಭ್ಯತೆ ಪರೀಶೀಲಿಸಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಶಿವಶಕ್ತಿ ಏತ ನೀರಾವರಿ ಯೋಜನೆಗೂ ಶಾಸಕರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಿದಗೌಡ ಪಾಟೀಲ, ಶಿವರಾಯ ಕಮತೆ, ಭರ್ಪ ನೇಜ, ಭರಮಪ್ಪ ಸೊಲ್ಲಾಪೂರೆ, ಅಜೀತ ಹಂಜಿ, ಬಸವರಾಜ ನೇಜ, ಶಿವಗೌಡ ಪಾಟೀಲ, ಪ್ರಭಾಕರ ಕಮತೆ, ಕುಮಾರ ಕಮತೆ, ರವಿ ಹಿರೇಕೊಡಿ, ರಾಜು ಮಗದುಮ್ಮ, ಮುನ್ನಾ ಪಟೇಲ, ಅಪ್ಪಣ್ಣ ಮಸ್ತಾಳಿ, ಬಸು ಮಾಳಗೆ, ಅಣ್ಣಪ್ಪ ಮುಗಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.