ವೀರಶೈವ-ಲಿಂಗಾಯತ ಒಳಪಂಗಡಗಳು ಒಗ್ಗೂಡಿ ನಡೆಯಬೇಕು: ದುಗ್ಗಳಿ ಶ್ರೀಗಳು

ವೀರಶೈವ-ಲಿಂಗಾಯತ ಒಳಪಂಗಡಗಳು ಒಗ್ಗೂಡಿ ನಡೆಯಬೇಕು: ದುಗ್ಗಳಿ ಶ್ರೀಗಳು  Veerashaiva-Lingayat sub-sects must move forward unitedly: Duggahalli Sri

ಲೋಕದರ್ಶನ ವರದಿ 

ವೀರಶೈವ-ಲಿಂಗಾಯತ ಒಳಪಂಗಡಗಳು ಒಗ್ಗೂಡಿ ನಡೆಯಬೇಕು: ದುಗ್ಗಳಿ ಶ್ರೀಗಳು  

ದುಗ್ಗಳಿ ಸುಕ್ಷೇತ್ರ  ಸೆ.13: ವೀರಶೈವ-ಲಿಂಗಾಯತ ಧರ್ಮ ವಿಶಾಲವಾಗಿದ್ದು, ಸರ್ವರಿಗೂ ಹಿತಕಾರಿಯಾದ ಧರ್ಮವಾಗಿದೆ. ಧರ್ಮದ ಎಲ್ಲ ಒಳಪಂಗಡಗಳು ಒಗ್ಗೂಡಿ ನಡೆದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ದುಗ್ಗಳಿ-ಕಡೆನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.  ದುಗ್ಗಳಿ ಶ್ರೀಮದ್ ರಂಭಾಪುರಿ ಶಾಖಾ ಶ್ರೀಗುರು ರೇವಣಸಿದ್ಧೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕಕಲ್ಯಾಣಕ್ಕಾಗಿ ಹಮ್ಮಿಕೊಂಡಿದ್ದ ಶಿವಪೂಜೆ ಹಾಗೂ ತಪೋನುಷ್ಠಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  ಇಷ್ಟಲಿಂಗ ಪೂಜೆಯಿಂದ ಸಕಲ ಅನಿಷ್ಟಗಳು ದೂರವಾಗುತ್ತವೆ. ಆದ್ದರಿಂದ ವೀರಶೈವ-ಲಿಂಗಾಯತ ಧರ್ಮದವರು ಕಡ್ಡಾಯವಾಗಿ ಇಷ್ಟಲಿಂಗ ಧಾರಣೆ ಮಾಡಬೇಕು. ಪ್ರತಿದಿನ ಕನಿಷ್ಠ ಒಂದು ಬಾರಿಯಾದರೂ ಇಷ್ಟಲಿಂಗ ಪೂಜೆ ನೆರವೇರಿಸಬೇಕು ಎಂದು ಸಲಹೆ ನೀಡಿದರು.  

ಶ್ರಾವಣ ಮಾಸದ ಅವಧಿಯಲ್ಲಿ ವಿವಿಧ ತಾಲೂಕುಗಳ ಗ್ರಾಮಗಳ ದೇವಾಲಯಗಳು ಹಾಗೂ ಸದ್ಭಕ್ತರ ಮನೆಗಳಲ್ಲಿ ನಡೆದ ಇಷ್ಟಲಿಂಗ ಪೂಜೆ, ಗ್ರಾಮಗಳಲ್ಲಿ ನಡೆದ ಪಾದಯಾತ್ರೆ ಹಾಗೂ ಭಕ್ತರಿಗೆ ಭಸ್ಮ-ರುದ್ರಾಕ್ಷಿ ಧಾರಣೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಸಂತಸ ತಂದಿವೆ ಎಂದರು.  ರೇವಣಸಿದ್ಧೇಶ್ವರ ಶ್ರೀಗಳು ನಡೆಸಿದ ಇಷ್ಟಲಿಂಗ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದರು. ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.  ಕಾಣಿಕೆ ರಹಿತ ಕಾರ್ಯಕ್ರಮ  ಶ್ರೀಗಳನ್ನು ಮನೆಗೆ ಅಥವಾ ಗ್ರಾಮಕ್ಕೆ ಬರಮಾಡಿಕೊಂಡಾಗ ಕಾಣಿಕೆ ನೀಡಬೇಕೆಂಬ ಭಾವನೆ ಭಕ್ತರಲ್ಲಿ ಸಾಮಾನ್ಯವಾಗಿದೆ. ಆದರೆ ಶ್ರಾವಣ ಮಾಸದ ಅವಧಿಯಲ್ಲಿ ಗ್ರಾಮಗಳ ದೇವಾಲಯಗಳು ಹಾಗೂ ಸದ್ಭಕ್ತರ ಮನೆಗಳಲ್ಲಿ ನಡೆದ ಇಷ್ಟಲಿಂಗ ಪೂಜೆಯ ಸಂದರ್ಭದಲ್ಲಿ ದುಗ್ಗಳಿ-ಕಡೆನಂದಿಹಳ್ಳಿ ಶ್ರೀಗಳು ಯಾವುದೇ ಕಾಣಿಕೆ ಸ್ವೀಕರಿಸದೆ ಭಕ್ತರನ್ನು ಆಶೀರ್ವದಿಸಿರುವುದು ವಿಶೇಷವಾಗಿತ್ತು.