ವೀರಭದ್ರೇಶ್ವರ ಜಯಂತಿ ಸೆ.15ರಂದು

ವೀರಭದ್ರೇಶ್ವರ ಜಯಂತಿ ಸೆ.15ರಂದು  Veerabhadreshwara Jayanti on September 15


ಲಕ್ಷ್ಮೇಶ್ವರ, ಸೆ. 8: ದೇಶದಾದ್ಯಂತ ಇರುವ ವೀರಭದ್ರೇಶ್ವರ ಸ್ವಾಮಿ ದೇವಾಲಯಗಳಲ್ಲಿ ಸೆ.15ರಂದು ವೀರಭದ್ರೇಶ್ವರ ಜಯಂತಿಯನ್ನು ವೈಭವದಿಂದ ಆಚರಿಸಲಾಗುವುದು.  ಶಿವನ ಅಂಶದಿಂದ ಭೂಮಿಯ ಮೇಲೆ ಜನ್ಮ ತಳೆದ ವೀರಭದ್ರ ದೇವರು ಉಗ್ರ ಸ್ವರೂಪದವನು. ದಕ್ಷ ಬ್ರಹ್ಮನು ನಡೆಸಿದ ಯಜ್ಞದಲ್ಲಿ ಶಿವನಿಗೆ ಅವಮಾನವಾದ ಹಿನ್ನೆಲೆಯಲ್ಲಿ ಪಾರ್ವತಿ ಯಜ್ಞಕುಂಡದಲ್ಲಿ ಪ್ರಾಣತ್ಯಾಗ ಮಾಡುತ್ತಾಳೆ. ಇದರಿಂದ ಕೋಪಗೊಂಡ ಶಿವನು ತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿದಾಗ ವೀರಭದ್ರನ ಅವತಾರವಾಗುತ್ತದೆ. ಶಿವನ ಆಜ್ಞೆಯಂತೆ ವೀರಭದ್ರನು ದಕ್ಷ ಬ್ರಹ್ಮನೊಂದಿಗೆ ಯುದ್ಧ ಮಾಡಿ ಆತನ ಸಂಹಾರ ಮಾಡುತ್ತಾನೆ. ಹೀಗಾಗಿ ವೀರಭದ್ರನು ಅಸುರರ ಶಿಕ್ಷಕ ಹಾಗೂ ದೇವತೆಗಳ ರಕ್ಷಕನೆಂದು ಪುರಾಣಗಳು ಸಾರುತ್ತವೆ.  

ದೇಶದ ವಿವಿಧೆಡೆ ವೀರಭದ್ರೇಶ್ವರ ಸ್ವಾಮಿ ದೇವಾಲಯಗಳಿದ್ದು, ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ವೀರಭದ್ರೇಶ್ವರ ಸ್ವಾಮಿಯ ಆರಾಧನೆ ವಿಶೇಷವಾಗಿದೆ. ಪ್ರತಿ ಮಂಗಳವಾರ ವೀರಭದ್ರನ ವಾರವೆಂದು ಭಕ್ತರು ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾರೆ.  

ವೀರಭದ್ರನ ಅವತಾರ ಹಾಗೂ ಮಹಿಮೆಯನ್ನು ಸಾರುವ ವೀರಗಾಸೆ, ವೀರಭದ್ರ ಕುಣಿತ, ಲಿಂಗದ ವೀರ, ಕಾಶಿ ಕುಣಿತ ಸೇರಿದಂತೆ ವಿವಿಧ ಜನಪದ ಕಲೆಗಳು ಜನಪ್ರಿಯವಾಗಿವೆ. ವೀರಭದ್ರನ ಮಹಿಮೆ ಸಾರುವ ಕಲಾವಿದರನ್ನು ‘ಪುರವಂತರು’ ಎಂದು ಕರೆಯಲಾಗುತ್ತದೆ. ಸಾಂಬಾಳ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾ, ಕತ್ತಿಯನ್ನು ಪ್ರದರ್ಶಿಸಿ ‘ಹಾ..ಹಾ, ರುದ್ರ, ವೀರಭದ್ರ’ ಎಂಬ ಉದ್ಗಾರಗಳ ಮೂಲಕ ವೀರಭದ್ರನ ಅವತಾರ ಮತ್ತು ಮಹಿಮೆಯನ್ನು ಸಾರುವುದು ಈ ಕಲೆಯ ವಿಶೇಷವಾಗಿದೆ.  

ಉತ್ತರ ಕರ್ನಾಟಕದಲ್ಲಿ ವೀರಭದ್ರೇಶ್ವರನನ್ನು ಮನೆದೇವರನ್ನಾಗಿ ಆರಾಧಿಸುವ ಪರಂಪರೆಯೂ ಇದೆ. ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಪುರವಂತರನ್ನು ಕರೆಸಿ ಮೆರವಣಿಗೆ ನಡೆಸುವ ಸಂಪ್ರದಾಯವಿದೆ. ಕನ್ನಡ ಜನಪದ ಸಾಹಿತ್ಯದಲ್ಲಿಯೂ ವೀರಭದ್ರನ ಕುಣಿತಕ್ಕೆ ವಿಶೇಷ ಸ್ಥಾನವಿದೆ.  

ಇಂತಹ ಮಹಿಮಾವಂತ ವೀರಭದ್ರೇಶ್ವರ ಸ್ವಾಮಿಯ ಜಯಂತಿ ಆಚರಣೆಯ ಪರಂಪರೆ ಇತ್ತೀಚಿನ ವರ್ಷಗಳಲ್ಲಿ ಮತ್ತಷ್ಟು ವಿಸ್ತರಿಸಿದ್ದು, ಈ ವರ್ಷ ಸೆ.15ರಂದು ನಾಡಿನಾದ್ಯಂತ ಇರುವ ವೀರಭದ್ರೇಶ್ವರ ಸ್ವಾಮಿ ದೇವಾಲಯಗಳಲ್ಲಿ ಜಯಂತಿಯನ್ನು ವೈಭವದಿಂದ ಆಚರಿಸಲಾಗುವುದು ಎಂದು ಶ್ರೀ ವೀರಣ್ಣ ಹಾಲಪ್ಪ ಪವಾಡಶೆಟ್ಟಿ ತಿಳಿಸಿದ್ದಾರೆ.