ಕಲಾವಿದರು ಹಾಗೂ ತಂತ್ರಜ್ಞರಿಗೆ ರಂಗಭೂಮಿ ಬುನಾದಿ:ಹಿರಿಯ ನಟಿ ಉಮಾಶ್ರೀ

ಕಲಾವಿದರು ಹಾಗೂ ತಂತ್ರಜ್ಞರಿಗೆ ರಂಗಭೂಮಿ ಬುನಾದಿ:ಹಿರಿಯ ನಟಿ ಉಮಾಶ್ರೀ Theater is a foundation for artists and technicians: Veteran actress Umashree

ಲೋಕದರ್ಶನ ವರದಿ                                       

ಧಾರವಾಡ 29:  ನಾಟಕ, ಸಂಗೀತ ಹಾಗೂ ಸಾಹಿತ್ಯಗಳ ಜ್ಞಾನವನ್ನು ನೀಡುವ ರಂಗಭೂಮಿಯು ಇಂದಿನ ಬೆಳೆಯುತ್ತಿರುವ ಸಿನೆಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಲಾವಿದರು ಹಾಗೂ ತಂತ್ರಜ್ಞರಾಗಿ  ಬೆಳೆಯಲು ಬುನಾದಿಯಾಗಿದೆ ಎಂದು ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ಹೇಳಿದರು. ಇಂದು ಧಾರವಾಡ ರಂಗಾಯಣವು ‘ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಆಯೋಜಿಸಿರುವ ಬೇಸಿಗೆ ಶಿಬಿರದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಂಗಭೂಮಿಯಲ್ಲಿ ಒಬ್ಬ ಕಲಾವಿದ ಸಕ್ರಿಯನಾಗಿ ಕಾರ್ಯನಿರ್ವಹಿಸಿದರೆ ಟಿವಿ, ಸಿನಿಮಾಗಳ ಅವಕಾಶಗಳು ಸಿಗುತ್ತವೆ.

ಅಂತ ಶಕ್ತಿ ರಂಗಭೂಮಿಗಿದೆ. ಆದರೆ ಇಂದಿನ ಯುವಜನತೆ ಕೇವಲ ಸಿನೆಮಾವನ್ನೆ ಕೇಂದ್ರಿಕರಿಸಿದ್ದಾರೆ. ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಕ್ಕಳಲ್ಲಿರುವ ಕಲೆಗಳನ್ನು ಗುರುತಿಸಿ ಅವರು ಅದರಲ್ಲಿ ಸಾಧನೆ ಮಾಡುವಂತೆ ಪೋಷಕರು ಸಹಕಾರವನ್ನು ನೀಡುತ್ತಿರುವುದು ಸಂತಸದ ವಿಷಯ. ತಾವು ಆಸಕ್ತಿ ಹೊಂದಿದ ಕ್ಷೇತ್ರದಲ್ಲಿ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡಬೇಕು. ಜೀವನದಲ್ಲಿ ಯಾವುದನ್ನು ನೀರೀಕ್ಷಿಸಬಾರದು ಎಂದರು.  

ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ತುಂಬಾನೇ ಅಂತರವಿದೆ. ಈ ರೀತಿ ಶಿಬಿರಗಳು, ಕಲೆಯನ್ನು ಗುರುತಿಸುವ ವೇದಿಕೆಗಳು ಅಂದು ಇರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಸ್ವಾತಂತ್ರ್ಯವೇ ಇರಲಿಲ್ಲ. ಆದರೆ ಇಂದು ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡುತ್ತಿರುವುದರಿಂದ ಹೆಣ್ಣು ಮಕ್ಕಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ನಟ, ನಟಿ, ಸಂಗೀತ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಬೇಕೆಂಬುದು ಪ್ರತಿಯೊಬ್ಬ ತಂದೆ-ತಾಯಿಯ ಆಶಯವಾಗಿರುತ್ತದೆ. ಆದರೆ ಅವರ ಮೇಲೆ ಒತ್ತಡವನ್ನು ಹೇರಬಾರದು. ಅವರ ಆಯ್ಕೆಗೆ ಅವರನ್ನು ಬಿಡಬೇಕು ಎಂದು ಸಲಹೆ ನೀಡಿದರು.

ರಂಗಾಯಣವು ಈ ಶಿಬಿರದ ಮೂಲಕ ಮಕ್ಕಳಲ್ಲಿರುವ ಕಲೆಗೆ ಪ್ರೋತ್ಸಾಹವನ್ನು ನೀಡುತ್ತಿದೆ. ಹೀಗೆ ರಂಗಾಯಣವು ಕಲೆಯನ್ನು ಗುರುತಿಸುವಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಲಾವಿದರನ್ನು ಪೋಷಿಸಲಿ ಎಂದು ಸಂತಸವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಝಕೀರ ನದಾಫ ಅವರಿಗೆ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ಹೂಗುಚ್ಛ ನೀಡಿ, ಅಭಿನಂದಿಸಿದರು.

ರಂಗಾಯಣದ ಆಡಳಿತಾಧಿಕಾರಿಗಳಾದ ಶಶಿಕಲಾ ಹುಡೇದ ಅವರು ಶಿಬಿರದ ಕುರಿತು ತಿಳಿಸಿದರು. ಗೀರೀಶ ಕರಿಯಪ್ಪವರ, ಜಯಾ, ಶಿಬಿರದ ಸಂಚಾಲಕರಾದ ಅರುಣಕುಮಾರ ಮೇದಾರ, ಸಂಗೀತಗಾರರಾದ ಸುನಂದಾ ನಿಂಬನಗೌಡರ, ರಂಗಾಯಣದ ರೆಪರ್ಟರಿ ಕಲಾವಿದರು ಹಾಗೂ ರಂಗಾಯಣದ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.