ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಶಾಸಕ ಕೃಷ್ಣನಾಯಕ

ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಶಾಸಕ ಕೃಷ್ಣನಾಯಕ  The country's development is possible only through education: MLA Krishna Nayaka

ಹೂವಿನಹಡಗಲಿ, ಸೆ.19: ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೃಷ್ಣನಾಯಕ ಹೇಳಿದರು.  ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಎಲ್ಕೆಜಿ-ಯುಕೆಜಿ ಮೂಲಕ ಆಂಗ್ಲ ಭಾಷಾ ಕಲಿಕೆಯ ಜೊತೆಗೆ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವೂ ದೊರೆಯುವಂತಾಗಿದೆ ಎಂದರು.  

ವ್ಯಕ್ತಿಯೊಬ್ಬರು ಜ್ಞಾನ ಸಂಪಾದಿಸಿ ಉನ್ನತ ಮಟ್ಟಕ್ಕೆ ತಲುಪಲು ಗುರುವಿನ ಮಾರ್ಗದರ್ಶನ ಅಗತ್ಯ. ಗುರಿ ಸಾಧನೆಗೆ ಗುರುಗಳ ಮಾರ್ಗದರ್ಶನ ಬಹುಮುಖ್ಯ ಎಂದು ಹೇಳಿದರು. ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರನ್ನು ಅಭಿನಂದಿಸಿದರು.  

ತಾಲೂಕು ಪಂಚಾಯಿತಿ ಇಒ ಪರಮೇಶ್ವರ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಬೇಕು. ಗುರು ಮತ್ತು ಗುರಿ ಇದ್ದಾಗ ಸಾಧನೆ ಸಾಧ್ಯ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು.  ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.