ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರ ಹಿ ಕನ್ನಡ ನಾಡಿಗೆ ಅಮೂಲ್ಯ ಸೇವೆ

ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರ ಹಿ ಕನ್ನಡ ನಾಡಿಗೆ ಅಮೂಲ್ಯ ಸೇವೆ  The contribution of the father of the Vachana, F.G. Halakatti, is immense and a valuable service to

ಲೋಕದರ್ಶನ ವರದಿ

ಗದಗ 01:  ವಚನ ಪಿತಾಮಹ ಎಂದೇ ಖ್ಯಾತರಾದ ಫ.ಗು. ಹಳಕಟ್ಟಿ ಅವರು ಸಂಶೋಧಕ, ಸಾಹಿತ್ಯ ಪ್ರಚಾರಕ ಹಾಗೂ ಸಂಪಾದಕರಾಗಿ ಕನ್ನಡ ನಾಡಿಗೆ ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಲಾಗುತ್ತಿದೆ.  

ಫಕೀರ​‍್ಪ ಗುರುಬಸಪ್ಪ ಹಳಕಟ್ಟಿ ಅವರು 1880ರ ಜುಲೈ 2ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ಹಾಗೂ ತಾಯಿ ದಾನಾದೇವಿ. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಇತಿಹಾಸ, ಧಾರ್ಮಿಕ ಸಾಹಿತ್ಯ ಹಾಗೂ ವಿವಿಧ ವಿಷಯಗಳ ಕುರಿತು ಅಧ್ಯಯನ ನಡೆಸಿದರು.  

ಮುಂಬೈಯ ಸೇಂಟ್ ಝೇವಿಯರ್ಸ್‌ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದ ಬೆಳವಣಿಗೆ, ಮಾತೃಭಾಷೆಯ ಉಳಿವು ಹಾಗೂ ಕನ್ನಡಿಗರ ಏಕತೆಯ ಬಗ್ಗೆ ಚಿಂತನೆ ನಡೆಸಿದರು. ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗೆ ಜೀವನ ಮುಡಿಪಾಗಿಡುವ ಸಂಕಲ್ಪ ಮಾಡಿದರು.  

1901ರಲ್ಲಿ ವಿಜ್ಞಾನ ಪದವಿ ಪಡೆದ ಅವರು 1904ರಲ್ಲಿ ಕಾನೂನು ಪದವಿ ಪಡೆದು ಬೆಳಗಾವಿಯಲ್ಲಿ ವಕೀಲ ವೃತ್ತಿ ಆರಂಭಿಸಿದರು. ಬಳಿಕ ವಿಜಯಪುರದಲ್ಲಿ ವಾಸವಿದ್ದು, ಯಶಸ್ವಿ ನ್ಯಾಯವಾದಿಯಾಗಿ ಹೆಸರು ಗಳಿಸಿದರು. ಆದರೆ ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ವೃತ್ತಿಜೀವನದ ಜೊತೆಗೆ ಸಾಹಿತ್ಯ ಸೇವೆಯಲ್ಲೂ ತೊಡಗಿದರು.  

ವಚನ ಸಾಹಿತ್ಯದ ಸಂಗ್ರಹ ಮತ್ತು ಸಂರಕ್ಷಣೆಯಲ್ಲಿ ಹಳಕಟ್ಟಿಯವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಿಂದೆ ಕೆಲವೇ ವಚನಕಾರರ ಕೃತಿಗಳು ಪರಿಚಿತವಾಗಿದ್ದ ಸಂದರ್ಭದಲ್ಲಿ ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರ ಸಾಹಿತ್ಯವನ್ನು ಬೆಳಕಿಗೆ ತಂದರು. ವಚನ ಸಾಹಿತ್ಯ ಸಾರ, ಶೂನ್ಯ ಸಂಪಾದನೆ, ಶಿವಾನುಭವ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಪ್ರಕಟಿಸಿದರು.  

ವಚನ ಸಾಹಿತ್ಯದ ಪ್ರಚಾರಕ್ಕಾಗಿ 1925ರಲ್ಲಿ "ಹಿತಚಿಂತಕ" ಮುದ್ರಣಾಲಯವನ್ನು ಸ್ಥಾಪಿಸಿದರು. 1926ರಲ್ಲಿ "ಶಿವಾನುಭವ" ಪತ್ರಿಕೆ ಆರಂಭಿಸಿ ವಚನ ಸಾಹಿತ್ಯ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಜನಜಾಗೃತಿ ಮೂಡಿಸಿದರು. ನಂತರ "ನವ ಕರ್ನಾಟಕ" ವಾರಪತ್ರಿಕೆಯನ್ನೂ ಆರಂಭಿಸಿದರು.  

ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಹಳಕಟ್ಟಿಯವರ ಸೇವೆ ಗಮನಾರ್ಹವಾಗಿದೆ. 1910ರಲ್ಲಿ ವಿಜಯಪುರದಲ್ಲಿ ಲಿಂಗಾಯತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಸಹಕಾರಿ ಸಂಘಗಳು, ಬ್ಯಾಂಕ್ ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳ ಸ್ಥಾಪನೆ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು.  

ಬಸವಣ್ಣನವರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನೂ ಮಾಡಿದರು. ವಚನ ಸಾಹಿತ್ಯದ ಪುನರುಜ್ಜೀವನಕ್ಕೆ ನೀಡಿದ ಕೊಡುಗೆಯಿಂದ ಅವರಿಗೆ "ವಚನ ಪಿತಾಮಹ" ಎಂಬ ಗೌರವ ದೊರೆಯಿತು.  

ಫ.ಗು. ಹಳಕಟ್ಟಿ ಅವರು 1964ರ ಜೂನ್ 29ರಂದು ನಿಧನರಾದರು. ಅವರ ಸಾಹಿತ್ಯ ಸೇವೆ, ಸಂಶೋಧನಾ ಕಾರ್ಯ ಹಾಗೂ ಸಮಾಜಮುಖಿ ಚಿಂತನೆಗಳು ಇಂದಿಗೂ ಕನ್ನಡಿಗರಿಗೆ ಪ್ರೇರಣೆಯಾಗಿವೆ.