ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ

ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ  Good response to free eye check-up camp

ಲೋಕದರ್ಶನ ವರದಿ 

ವಿಜಯಪುರ: ಕಣ್ಣುಗಳು ಮಾನವನ ಅತ್ಯಂತ ಅಮೂಲ್ಯ ಅಂಗಗಳಾಗಿದ್ದು, ಅವುಗಳ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನ್ಯಾಯವಾದಿ ದಾನೇಶ್ ಅವಟಿ ಹೇಳಿದರು. ನಗರದ ಹೊರವಲಯದ ಬುರನಾಪುರ ರಸ್ತೆಯ ಬಸವನಗರದಲ್ಲಿರುವ ಸತ್ಯ ಸಾಯಿಬಾಬಾ ಶಾಲೆಯಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಂಘಟನೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಇತ್ತೀಚಿನ ದಿನಗಳಲ್ಲಿ ಮೊಬೈಲ್, ಟಿವಿ ಹಾಗೂ ಕಂಪ್ಯೂಟರ್ಗಳ ಅತಿಯಾದ ಬಳಕೆಯಿಂದ ಕಣ್ಣಿನ ನೋವು, ಕಣ್ಣೀರು ಹರಿಯುವುದು, ದೃಷ್ಟಿ ಮಂಕಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.  ಕಾರ್ಯಕ್ರಮದ ಸಾನ್ನಿಧ್ಯವನ್ನು ಬಸವನಗರದ ಶ್ರೀ ಸಿದ್ದಲಿಂಗ ಆಶ್ರಮದ ಶ್ರೀ ಮಹಾದೇವ ಮಹಾರಾಜರು ವಹಿಸಿ ಆಶೀರ್ವಚನ ನೀಡಿದರು. ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ. ವಿನುತಾ ಗೌಡ ಹಾಗೂ ಡಾ. ಜುನೈದ್ ನಧಾಫ್ ಕಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು. ಶ್ರೀ ಸತ್ಯ ಸಾಯಿಬಾಬಾ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಸ್‌. ಜಾಧವ್ ಸಹ ಉಪಸ್ಥಿತರಿದ್ದರು.