ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯವಾಗಬೇಕು

ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯವಾಗಬೇಕು   Teaching profession should be a sacred task of nation building

ಹಾವೇರಿ   08:  ಗುರು ಪರಂಪರೆಯು ಭಾರತದ ಆಸ್ಮಿತೆಯಾಗಿದ್ದು,  ಶಿಕ್ಷಕ ವೃತ್ತಿಯು ಕೇವಲ ಒಂದು ಉದ್ಯೋಗವಲ್ಲ, ಅದು ಅತ್ಯಂತ ಪವಿತ್ರ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯವಾಗಿದೆ.  ಕೇವಲ ಮಗುವಿಗೆ ಜ್ಞಾನವನ್ನು ಮಾತ್ರ ಹಂಚುವದಲ್ಲ, ಅದರ ಜೊತೆಗೆ ದೇಶದ ಸತ್ಪ್ರಜೆಯನ್ನಾಗಿ ಮಾಡುವದೇ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹಾವೇರಿ ತಾಲ್ಲೂಕಿನ ನೂತನ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಶ್ರೀನಿವಾಸ್ ಹೇಳಿದರು.   ನಗರದ ಹುಕ್ಕೇರಿಮಠದ ರಾಚೋಟೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯಲ್ಲಿ ಹಮ್ಮಿಕೊಂಡಿದ್ದ, ತಾಲೂಕಿನ ಅನುದಾನಿತ ಮುಖ್ಯೋಪಾಧ್ಯಾಯರ ಸಂಘದ ಉದ್ಘಾಟನೆ,

ಪದಗ್ರಹಣ ಮತ್ತು ನೂತನ ಕ್ಷೇತ್ರಶಿಕ್ಷಣಾಧಿಕಾರಿಗಳ ಸನ್ಮಾನ ಸಮಾರಂಭಕ್ಕೆ ಚಾಲನೆ  ನೀಡಿ ಅವರು ಮಾತನಾಡಿದರು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾವೇರಿ ತಾಲೂಕು ಜಿಲ್ಲೆಯಲ್ಲಿ ಮೂರನೇ  ಸ್ಥಾನ ಪಡೆದಿದೆ.  ಈ ವರ್ಷದಲ್ಲಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಸಾಮೂಹಿಕವಾಗಿ ಪ್ರಯತ್ನಿಸಬೇಕಾಗಿದೆ. ನೂರಕ್ಕೆ ನೂರು ಫಲಿತಾಂಶವನ್ನು ಎಲ್ಲಾ ಶಾಲೆಗಳೂ ಪಡೆಯಬೇಕು. ತಾಲ್ಲೂಕಿನ ಸರಕಾರಿ, ಅನುದಾನಿತ, ಮತ್ತು ಅನುದಾನಿತ ರಹಿತ ಶಾಲೆಯ ಶಿಕ್ಷಕರು ಎಂದು ತಾರತಮ್ಯ ಮಾಡದೇ ಎಲ್ಲರನ್ನು ಸಮಾನವಾಗಿ ಕಂಡು ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಲಾಗುವದು ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರೌಢಶಾಲೆ ಪರೀಕ್ಷಾ ಮಂಡಳಿಯ ಎಂ.ಎಸ್‌. ಕೆಂಚನಗೌಡರ ವಹಿಸಿದ್ದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಎಂ.ಬಿ. ರಮೇಶ, ಪತ್ತಿನ ಸಂಘದ ಅಧ್ಯಕ್ಷ ಶರಣಪ್ಪ ಇಟಗಿ, ಶೋಭಾ ಜಾಗಟಗೇರಿ, ಇಸಿಓ ಬಿ.ಕೆ. ಹನುಮಗೌಡ, ವಿನಾಯಕ ಗಡ್ಡದ, ಎಂ.ಎಸ್‌. ಬಿಸ್ಟನಗೌಡ್ರ, ಬಿ.ಎನ್‌. ಗಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.ಆರಂಭದಲ್ಲಿ   ಪುಷ್ಪಾ ಕೆರೂಡಿ ಪ್ರಾರ್ಥಿಸಿದರು. ಸಿ.ಎ. ದಳವಾಯಿ ಸ್ವಾಗತಿಸಿದರು. ಎಸ್‌.ಎನ್‌. ಮಳೆಪ್ಪನವರ ನಿರೂಪಿಸಿದರು. ಕೊನೆಯಲ್ಲಿ ಬಿ. ಝೇಂಕಾರ ವಂದಿಸಿದರು.