ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸ್ವ-ಹಣದಿಂದ ಅಂಗನವಾಡಿ ಕೊಠಡಿ ನಿರ್ಮಿಸಿದ ಶಿಕ್ಷಕಿ

ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಸ್ವ-ಹಣದಿಂದ ಅಂಗನವಾಡಿ ಕೊಠಡಿ ನಿರ್ಮಿಸಿದ ಶಿಕ್ಷಕಿ Teacher builds Anganwadi room with her own money to improve children's learning quality

ದೇವರ ಹಿಪ್ಪರಗಿ 04: ಅಂಗನವಾಡಿ ಕೇಂದ್ರ ನಡೆಸಲು ಸ್ಥಳವಕಾಶ ಇಲ್ಲದೇ ಇದ್ದಾಗ ಸ್ವ ಹಣದಿಂದ ತನ್ನ ತಂದೆಯ ಸ್ವಂತ ಜಾಗದಲ್ಲಿ ಶಿಕ್ಷಕಿ ಚನ್ನಮ್ಮ ರಾಠೋಡ ಅವರು ಅಂಗನವಾಡಿ ಕೋಣೆ ನಿರ್ಮಿಸಿ, ಮಕ್ಕಳಿಗೆ ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣ ಒದಗಿಸಲು ಮುಂದಾಗಿರುವುದು ನಿಜಕ್ಕೂ ಅಭಿನಂದನಾರ್ಹವಾದ ಕಾರ್ಯವಾಗಿದೆ ಎಂದು ವಲಯ ಮೇಲ್ವಿಚಾರಕಿ ಬಾನುಬಿ ದಿಕ್ಕಸಂಗಿ ಹೇಳಿದರು.ತಾಲೂಕಿನ ಯಲಗೋಡ ತಾಂಡಾದಲ್ಲಿ ಅಂಗನವಾಡಿ ಕೋಣೆ ಉದ್ಘಾಟನೆ ಮಾಡಿ, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ತಾಂಡಾದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರವು ಮಕ್ಕಳ ಕಲಿಕೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದು ಒಂದು ಮಾದರಿ ಅಂಗನವಾಡಿ ಎಂದು ಹೇಳಲು ತುಂಬಾ ಖುಷಿಯಾಗುತ್ತದೆ. ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಶಿಕ್ಷಕಿಯು ಸ್ವ ಹಣದಿಂದ ಅಂಗನವಾಡಿ ನಿರ್ಮಿಸಿದ್ದು, ಮಕ್ಕಳ ಮೇಲಿನ ಪ್ರೀತಿ ಎದ್ದು ಕಾಣುತ್ತದೆ.

ಹಿರಿಯರು, ಮಕ್ಕಳ ಪಾಲಕರು ಹಾಗೂ ತಾಂಡಾದ ಎಲ್ಲಾ ಜನರು ಕೂಡಿ ಕೇಂದ್ರಕ್ಕೆ ಸ್ಥಳ ಗುರುತಿಸಿರಿ. ನಂತರ ಇಲಾಖೆಯಿಂದ ಶಾಶ್ವತ ಕಟ್ಟಡ ನಿರ್ಮಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಸ್ನೇಹ ಸಂಸ್ಥೆ ಋಕ ಯೋಜನೆಯ ಸಯೋಜಕ ಸಾಗರ ಎಸ್ ಘಾಟಗೆ ಮಾತನಾಡಿ ಯಲಗೋಡ ವಲಯದಲ್ಲಿ ಇರುವ 42 ಅಂಗನವಾಡಿ ಕೇಂದ್ರಗಳಲ್ಲಿ ಇದು ಒಂದು ಮಾದರಿ ಅಂಗನವಾಡಿ ಕೇಂದ್ರವಾಗಿದೆ. ಇಲ್ಲಿಯ ಮಕ್ಕಳ ಕಲಿಕೆ ತುಂಬಾ ಉತ್ತಮವಾಗಿದೆ. ಎಲ್ಲರೂ ಒಟ್ಟಾಗಿ ತಾಂಡಾದಲ್ಲಿ ಜಾತ್ರೆ ಹೇಗೆ ಮಾಡುತ್ತಿರೋ ಹಾಗೆ ಮಕ್ಕಳಿಗಾಗಿ ಎಲ್ಲರೂ ಒಂದಾಗಿ ಈ ಕೇಂದ್ರಕ್ಕೆ ಪಂಚಾಯತಿಯಿಂದ ಸ್ಥಳ ಗುರುತಿಸಿ ಕಟ್ಟಡ ನಿರ್ಮಿಸಲು ಸಹಾಯ ಮಾಡಿ. ಇದರಿಂದ ಮುಂದೆ ಬರುವ ಮಕ್ಕಳ ಕಲಿಕೆಗೆ ಸಹಕಾರಿ ಆಗುವುದಲ್ಲದೇ ಶಾಶ್ವತವಾದ ಪರಿಹಾರ ಸಿಗುತ್ತದೆ ಎಂದು ಸಮುದಾಯದ ಪ್ರಮುಖರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ದಾಣಿಗಳಾದ ಸಂತೋಷ ಶಂಕರ ಚವ್ಹಾಣ, ಸಚಿನ ಭೀಮು ರಾಠೋಡ, ಉಮೇಶ ರಾಮಚಂದ್ರ ರಾಠೋಡ ಅವರು ಮಕ್ಕಳಿಗೆ ನೋಟಪುಸ್ತಕ, ಪೆನ್ನು ್ಘ ಕೇಂದ್ರಕ್ಕೆ ವಿವಿಧ ಫೋಟೋಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಪ್ರೇಮಸಿಂಗ ರಾಠೋಡ, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ಮಕ್ಕಳ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.ಸಂಪನ್ಮೂಲ ವ್ಯಕ್ತಿ ಬಾಗಣ್ಣ ಹಾಳಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.