ಯರಗಟ್ಟಿಯಲ್ಲಿ 11 ಸಾವಿರಕ್ಕೂ ಅಧಿಕ ನಕಲಿ ಮತದಾರರ ಅನುಮಾನ: ವಿಶೇಷ ಪರಿಷ್ಕರಣೆಗೆ ಬಿಜೆಪಿ ಒತ್ತಾಯ

ಯರಗಟ್ಟಿಯಲ್ಲಿ 11 ಸಾವಿರಕ್ಕೂ ಅಧಿಕ ನಕಲಿ ಮತದಾರರ ಅನುಮಾನ: ವಿಶೇಷ ಪರಿಷ್ಕರಣೆಗೆ ಬಿಜೆಪಿ ಒತ್ತಾಯ  Suspicion of over 11,000 fake voters in Yaragati: BJP demands special revision

ಲೋಕದರ್ಶನ ವರದಿ 

ಯರಗಟ್ಟಿ 29: ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿರುವ ಶಂಕೆ ವ್ಯಕ್ತವಾಗಿದ್ದು, ಅವುಗಳನ್ನು ಸಮಗ್ರವಾಗಿ ಪರೀಶೀಲಿಸಿ ತೆರವುಗೊಳಿಸಬೇಕು ಎಂದು ಸವದತ್ತಿ ಬಿಜೆಪಿ ಮಂಡಲ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾವಮನಿ ಆಗ್ರಹಿಸಿದರು.  

ಯರಗಟ್ಟಿ ಸಮೀಪದ ಬುದಿಗೊಪ್ಪ ಗ್ರಾಮದಲ್ಲಿ ನಡೆದ ಮತದಾರರ ವಿಶೇಷ ಪರಿಷ್ಕರಣೆ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಬೂತ್ಗೆ ಬಿಎಲ್‌ಎ-2ಗಳನ್ನು ನೇಮಕ ಮಾಡಲಾಗಿದೆ. ಅವರು ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ಮೃತರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ನಡೆಯಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ಅವರು ತಿಳಿಸಿದರು.  

ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಮುರುಗೋಡ ಮಾತನಾಡಿ, ಜೂನ್ 30ರಿಂದ ಆರಂಭವಾಗುವ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮಕ್ಕೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಚುನಾವಣಾ ಆಯೋಗದ ಸೂಚನೆಯಂತೆ ನಡೆಯುವ ಪರಿಷ್ಕರಣೆ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.  

ಸಭೆಯಲ್ಲಿ ಬಿಜೆಪಿ ಮುಖಂಡರಾದ ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಈರಣ್ಣ ಚಂದರಗಿ, ಆನಂದ ಬಾಗೋಡಿ, ಕೃಷ್ಣ ತೊರಗಲ್ಲ, ಚೇತನ ಜಕಾತಿ, ವೀರಣ್ಣ ವೀರಶೆಟ್ಟಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.