ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತುಗಳು ಮುನ್ನಡೆ, ಹತ್ತಿ-ಬಿಳಿ ಜೋಳ ಬಿತ್ತನೆಗೆ ಶುಭ ಸೂಚನೆ

ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತುಗಳು ಮುನ್ನಡೆ, ಹತ್ತಿ-ಬಿಳಿ ಜೋಳ ಬಿತ್ತನೆಗೆ ಶುಭ ಸೂಚನೆ  Kara full moon celebration: White bulls advance, auspicious sign for sowing cotton and white corn

ತಾಳಿಕೋಟಿ 29: ಉತ್ತರ ಕರ್ನಾಟಕದ ವಿಶೇಷ ಕೃಷಿ ಸಂಪ್ರದಾಯದ ಹಬ್ಬವಾದ ಕಾರ ಹುಣ್ಣಿಮೆಯನ್ನು ಪಟ್ಟಣದಲ್ಲಿ ಸೋಮವಾರ ರೈತರು ಸಂಭ್ರಮ-ಸಡಗರದಿಂದ ಆಚರಿಸಿದರು.  ಹಬ್ಬದ ಅಂಗವಾಗಿ ನಡೆದ ಕರಿ ಹರಿಯುವ ಕಾರ್ಯಕ್ರಮಕ್ಕಾಗಿ ರೈತರು ತಮ್ಮ ಎತ್ತುಗಳನ್ನು ವಿಶೇಷವಾಗಿ ಶೃಂಗರಿಸಿ, ಸಂಪ್ರದಾಯದಂತೆ ಪಟ್ಟಣದ ಗೌಡಕಿ ಮನೆತನದ ಬಾಪುಗೌಡ ಪಾಟೀಲ ಅವರ ಮನೆಯಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಶ್ರೀ ಅಂಬಾಭವಾನಿ ದೇವಸ್ಥಾನದಿಂದ ಪಂಚಶಹಿದ್ ದರ್ಗಾವರೆಗೆ ಎತ್ತುಗಳ ಓಟದ ಸ್ಪರ್ಧೆ ನಡೆಯಿತು.  

ಸ್ಪರ್ಧೆಯಲ್ಲಿ ಜೋಡಿ ಬಿಳಿ ಎತ್ತುಗಳು ಮೊದಲಿಗೆ ಗುರಿ ತಲುಪಿದವು. ರೈತರ ಸಂಪ್ರದಾಯದ ಪ್ರಕಾರ ಬಿಳಿ ಬಣ್ಣವು ಹತ್ತಿ ಮತ್ತು ಬಿಳಿ ಜೋಳದ ಸಂಕೇತವಾಗಿರುವುದರಿಂದ, ಈ ವರ್ಷ ರೈತರು ತಮ್ಮ ಜಮೀನುಗಳಲ್ಲಿ ಹತ್ತಿ ಹಾಗೂ ಬಿಳಿ ಜೋಳವನ್ನು ಹೆಚ್ಚಾಗಿ ಬಿತ್ತಿದರೆ ಉತ್ತಮ ಫಸಲು ದೊರೆಯಲಿದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಶರಣಗೌಡ ಪಾಟೀಲ, ಗನಿಸಾಬ ಲಾಹೋರಿ, ಆದಮಸಾಬ ಕೊಡೆಕಲ್ಲ, ಸಿಕಂದರ ಡೋಣಿ, ಹುಸೇನ ಡೋಣಿ, ಹುಸೇನ ಕೆಂಭಾವಿ, ಬಬ್ಲು ಕೆಂಭಾವಿ, ಆಮದ ಜಮಾದಾರ, ಮಹಮ್ಮದ್ ಡೋಣಿ, ಮಂಜು ಆಲ್ಯಾಳ, ಫಯಾಜ ಇನಾಮದಾರ, ಹುಸೇನಸಾಬ ಕಟ್ಟಿ, ಅಬ್ದುಲಸಾಬ ಉತ್ನಾಳ, ದಸ್ತಗೀರ ಕೆಂಭಾವಿ ಸೇರಿದಂತೆ ಅನೇಕ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.