ದರ್ಶನ್‌ ಸೇರಿ 7 ಆರೋಪಿಗಳಿಗೆ ಸುಪ್ರೀಂ ತಾತ್ಕಾಲಿಕ ರಿಲೀಫ್

Supreme Court grants temporary relief to 7 accused including Darshan

ಬೆಂಗಳೂರು 21: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌  ಮತ್ತು ಇತರೆ ಆರೋಪಿಗಳಿಗೆ ಈ ಹಿಂದೆ ಹೈಕೋರ್ಟ್‌ ಜಾಮೀನು ನೀಡಿತ್ತು. ಇದೀಗ 7‌ ಮಂದಿಯ ಜಾಮೀನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಮುಂದೂಡಿದ್ದು, ಆ ಮೂಲಕ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ಪ್ರಕರಣದಲ್ಲಿ ದರ್ಶನ್‌, ಪವಿತ್ರಾ ಗೌಡ ಸೇರಿ 17 ಮಂದಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು. ಸುಮಾರು 6 ತಿಂಗಳುಗಳ ಕಾಲ ದರ್ಶನ್‌ ಜೈಲಿನಲ್ಲಿದ್ದರು. ಇದಾದ ಬಳಿಕ ಕರ್ನಾಟಕ ಹೈಕೋರ್ಟ್‌ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಪ್ರಕರಣದ ಏಳು ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಅದರಂತೆ ಪೊಲೀಸರು ದರ್ಶನ್‌ ಸೇರಿ 7 ಮಂದಿಯ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಏ.22 ಸುಪ್ರೀಂಕೋರ್ಟ್‌ನಲ್ಲಿ ನ್ಯಾ.ಜೆ.ಬಿ.ಪರ್ದೀವಾಲ, ನ್ಯಾ .ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠದಲ್ಲಿ ನಡೆದಿತ್ತು.

ಮೇ.21 ಬುಧವಾರ  ಅರ್ಜಿಯ ವಿಚಾರಣೆ ಆಗಬೇಕಿತ್ತು. ಆದರೆ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ ಆಗಿದೆ. ಬೇಸಿಗೆಯ ರಜೆಯ ಬಳಿಕ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಜುಲೈ 14ಕ್ಕೆ ಬೇಸಿಗೆ ರಜೆ ಅಂತ್ಯವಾಗಲಿದೆ. ಇದಾದ ಬಳಿಕ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್​ ಹೇಳಿದೆ. ಅರ್ಜಿ ವಿಚಾರಣೆಯ ದಿನಾಂಕ ಇನ್ನು ನಿಗದಿಯಾಗಿಲ್ಲ ಆ ಮೂಲಕ ಜುಲೈ 14ರವರೆಗೆ ದರ್ಶನ್‌ ಸೇರಿ 7 ಆರೋಪಿಗಳಿಗೆ ರಿಲೀಫ್‌ ಸಿಕ್ಕಿದೆ.